ಬೆಂಗಳೂರು/ಕೇರಳ: ವಿಶೇಷ ಪೂಜೆ ಸಲ್ಲಿಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇರಳಕ್ಕೆ ತೆರಳಿದ್ದು, ಕೇರಳ ವಿದ್ಯಾರ್ಥಿ ಯೂನಿಯನ್ ಮತ್ತು ಕಾರ್ಯಕರ್ತರು ಸಿಎಂ ಬಿಎಸ್ವೈ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಮುಂದಾದ ಘಟನೆ ನಡೆದಿದೆ.
ಮಂಗಳೂರು ಗೋಲಿಬಾರ್ ಹಾಗೂ ಕೇರಳ ಪತ್ರಕರ್ತರನ್ನು ಬಂಧಿಸಿದ್ದ ಘಟನೆ ಖಂಡಿಸಿ ಸಿಎಂ ಬಿಎಸ್ವೈ ವಿರುದ್ಧ ಕೇರಳದಲ್ಲಿ ಪ್ರತಿಭಟನೆ ಯತ್ನ ನಡೆಯಿತು. ತ್ರಿವೇಂಡ್ರಂನ ತಂಪನೂರು ಬಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೆರಳುತ್ತಿದ್ದ ವೇಳೆ ಸಿಎಂ ಕಾರಿಗೆ ಅಡ್ಡ ಬಂದು ಪ್ರತಿಭಟನೆ ನಡೆಸಲು ಕೇರಳ ವಿದ್ಯಾರ್ಥಿ ಯೂನಿಯನ್ ಹಾಗು ಕೇರಳ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದರು. ಕೂಡಲೇ ಪೊಲೀಸರು ಪ್ರತಿಭಟನೆ ನಡೆಸಲು ಯತ್ನಿಸಿದ 8 ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದು, ಸಿಎಂ ಕಾರು ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು.
ಡಿ.26ರಂದು ಯಡಿಯೂರಪ್ಪ ರಾಶಿಗೆ ದೋಷವಿದ್ದು, ಅದನ್ನು ಪರಿಹಾರ ಮಾಡಿಕೊಳ್ಳಲು ಪೂಜೆ ನಡೆಸಲೆಂದು ಕೇರಳಕ್ಕೆ ತೆರಳಿರುವ ಸಿಎಂ ಕೇರಳಕ್ಕೆ ತೆರಳಿದ್ದಾರೆ. ಇಂದು ಅನಂತಪದ್ಮನಾಭ ಹಾಗೂ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ದೇವರ ದರ್ಶನ ಪಡೆದರು. ನಾಳೆಯೂ ಅವರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಡಿ.25 ರಂದು ಬೆಳಗ್ಗೆ ಕೇರಳದಿಂದ ನೇರವಾಗಿ ಮಂಗಳೂರಿಗೆ ಸಿಎಂ ಆಗಮಿಸಲಿದ್ದಾರೆ. ಗೋಲಿಬಾರ್ ಪ್ರಕರಣ ಬಳಿಕ ಮಂಗಳೂರಿಗೆ 2ನೇ ಬಾರಿ ಭೇಟಿ ನೀಡಲಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.