ಬೆಂಗಳೂರು: ಬಿಡಿಎ ತನ್ನ ಮೂರ್ಖತನದಿಂದ ಮಾಡಿರುವ ದೊಡ್ಡ ತಪ್ಪುಗಳಿಗೆ ಜನರನ್ನು ಹೊಣೆಗಾರರನ್ನಾಗಿ ಮಾಡಿ, ಅವರ ಆಸ್ತಿಯನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅರೋಪಿಸಿದ್ದಾರೆ.
ಶಿವರಾಮ ಕಾರಂತ ಬಡಾವಣೆ ಯೋಜನೆಯನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಇಂದು ಬಿಡಿಎ ಮುತ್ತಿಗೆ ಹಾಕಲು ಸ್ಥಳೀಯರು, ಬಡಾವಣೆ ನಿಯೋಜಿತ ಜಾಗದ ಭೂ ಮಾಲೀಕರು ಹಾಗೂ ರೈತರು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. ಪ್ರತಿಭಟನೆಗಾಗಿ ಬೆಳಗ್ಗೆಯೇ ಪ್ಯಾಲೇಸ್ ಗ್ರೌಂಡಿನ 9ನೇ ನಂಬರಿನ ಗೇಟ್ ಬಳಿ ಜನ ಸೇರಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಡಿಎಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಜೊತೆಗೆ ಅರಮನೆ ಮೈದಾನದ ಮುಂದೆಯೂ ಪ್ರತಿಭಟನೆಗೆ ಅವಕಾಶ ಕೊಡದೆ ಪ್ರತಿಭಟನಾಕಾರರನ್ನು ಬಸ್ಸಿನಲ್ಲಿ ಬಲವಂತವಾಗಿ ಕರೆದೊಯ್ದು ಮೌರ್ಯ ಸರ್ಕಲ್ನಲ್ಲಿ ಪ್ರತಿಭಟಿಸುವಂತೆ ತಿಳಿಸಲಾಯಿತು. ಈ ವೇಳೆ ಪ್ರತಿಭಟನೆಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಬಿಡಿಎ ಮುಂದೆ ಈ ವಿಚಾರವಾಗಿ ಮಾತನಾಡಿದ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಯೋಜನೆ 12 ವರ್ಷಗಳ ಹಿಂದೆ ನೋಟಿಫಿಕೇಶನ್ ಆಗಿದೆ. ನಂತರ ಯಡಿಯೂರಪ್ಪ, ಸಿದ್ಧರಾಮಯ್ಯನವರು ಡಿನೋಟಿಫೈ ಮಾಡಿದ್ದು ಯಾಕೆ? ಆ ಯೋಜನೆ ಸರಿ ಇರಲಿಲ್ವಾ? ದುಡ್ಡಿರುವವರನ್ನು ಕಾಪಾಡಲು ಕೆಲವು ಜಾಗ ಬಿಟ್ಟುಬಿಟ್ಟಿರಿ. 2014-18 ರವರೆಗೆ ಮನೆ, 24 ಅಪಾರ್ಟ್‌ಮೆಂಟ್ ಕಟ್ಟಲು ಅನುಮತಿ ಕೊಟ್ಟಿರಿ. ಆದ್ರೆ ಭೂಮಿ ಉಳಿಸಿಕೊಂಡವರ ಭೂಮಿ ಕಿತ್ತುಕೊಳ್ಳಲು ಹೊರಟಿರುವುದು ಮೂರ್ಖತನ ಎಂದರು.
ಇದನ್ನೂ ಓದಿ: ಶಿವರಾಮ ಕಾರಂತ ಬಡಾವಣೆ ಭೂಸ್ವಾಧೀನಕ್ಕೆ ವಿರೋಧ: ಬಿಡಿಎ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ
ಸುಪ್ರೀಂಕೋರ್ಟ್ ಹೇಳುತ್ತಿದೆ ಅಂತಾ ಬಿಡಿಎ ಜನರಿಗೆ ಕಿರುಕುಳ ಕೊಡುತ್ತಿದೆ. ಜನರಿಗೆ ಕಿರುಕುಳ ಕೊಟ್ಟು ಲೇಔಟ್ ಮಾಡೋದು ಎಷ್ಟು ಸರಿ? ಸತ್ಯಾಗ್ರಹ ತಡೆಯೋದು ಸರಿಯಲ್ಲ. ಇದು ನಾಚಿಗೇಡಿನ ಸಂಗತಿ. ಇದನ್ನು ಖಂಡಿಸಿ ಮೌರ್ಯ ಸರ್ಕಲ್ನ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದರು.
ಶಾಸಕ ವಿಶ್ವನಾಥ್ ಮಾತು ತಪ್ಪಬಾರದು. ವಿರೋಧ ಪಕ್ಷದಲ್ಲಿದ್ದಾಗ ಒಂದು ಮಾತು, ಆಡಳಿತ ಪಕ್ಷದಲ್ಲಿದ್ದಾಗ ಒಂದು ಮಾತು ಮಾತನಾಡೋದು ಸರಿಯಲ್ಲ. ಅವರು ಮಾತಿಗೆ ತಪ್ಪಿದ್ದಕ್ಕೆ ಜನ ಇಂದು ಬೀದಿಗೆ ಬಂದಿದ್ದಾರೆ ಎಂದರು. ಇದು ಬಿಡಿಎ ಹಾಗೂ ಕೋರ್ಟ್ ಮುಂದಿನ ವಿಚಾರ ಅಂತಾ ರೈತರ ಧ್ವನಿಯನ್ನು ಹತ್ತಿಕ್ಕಿ, ಸುಪ್ರೀಂಕೋರ್ಟ್ ಹೆಸರಲ್ಲಿ ರೈತರ ದರೋಡೆ ಮಾಡಲು ಹೊರಟಿದ್ದಾರೆ. ಯಾವುದೇ ಕಾರಣಕ್ಕೂ ಯೋಜನೆ ಆಗಲು ಬಿಡೋದಿಲ್ಲ ಎಂದರು.