ಬೆಂಗಳೂರು: ತೀವ್ರ ಚರ್ಚೆಗೆ ಗ್ರಾಸವಾಗಿರುವ ಅಮುಲ್ ಕಂಪನಿಯ ಉತ್ಪನ್ನಗಳನ್ನು ನಂದಿನಿ ಜೊತೆ ವಿಲೀನಕ್ಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದೆ. ರಾಜ್ಯದ ನಂದಿನಿ ಹಾಲಿನ ಜೊತೆ ಗುಜರಾತ್ ಮೂಲದ ಅಮುಲ್ ಕಂಪನಿ ವಿಲೀನಗೊಳಿಸಬಾರದು. ಆನ್ಲೈನ್ ಮೂಲಕ ಮಾರಾಟಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಅಮೂಲ್ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಅಮುಲ್ ಕಂಪನಿಯ ಹಾಲು, ಬೆಣ್ಣೆ ಹಾಗೂ ತುಪ್ಪ ಸೇರಿದಂತೆ ರಸ್ತೆಗೆ ಎಸೆದು ಅಕ್ರೋಶ ವ್ಯಕ್ತಪಡಿಸಿದರು. ಗೋ ಬ್ಯಾಕ್ ಅಮುಲ್, ಅಮುಲ್ ಬೇಡ.. ನಂದಿನಿ ಉಳಿಸಿ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ಕಾರ್ಯಕರ್ತರ ಪ್ರತಿಭಟನೆ ಜೋರಾಗುತ್ತಿದ್ದಂತೆ ಮೈಸೂರು ಬ್ಯಾಂಕ್ ವೃತ್ತದಲ್ಲೇ ಅಮುಲ್ ಕಂಪನಿಯ ಪ್ರತಿಕೃತಿ ದಹಿಸಿದರು. ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.
ಇದಕ್ಕೂ ಮುನ್ನ ಕರವೇ ಸಂಘಟನೆ ಧರ್ಮರಾಜ್ ಗೌಡ ಮಾತನಾಡಿ, ಶೀಘ್ರದಲ್ಲಿಯೇ ಅಮುಲ್ ಫ್ಯಾಕ್ಟರಿ, ಅಮುಲ್ ಹಾಲು ವಿತರಣಾ ಘಟಕದ ಮೇಲೆ ದಾಳಿ ನಡೆಸುತ್ತೇವೆ. ನಾರಾಯಣ ಗೌಡರ ಕರೆಗೆ ಕಾಯುತ್ತಿದ್ದೇವೆ. ನಂದಿನಿ ಮೇಲಿನ ದಾಳಿಯನ್ನು ನಾವು ಸಹಿಸುವುದಿಲ್ಲ. ಇದು ನಂದಿನಿಯನ್ನು ಮುಚ್ಚುವ ಹುನ್ನಾರ. ನಮ್ಮ ರೈತರ ಹೊಟ್ಟೆಯ ಮೇಲೆ ಹೊಡೆಯುವ ಪ್ರಯತ್ನ. ನಾವು ಕೈಕಟ್ಟಿ ಕೂರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮುಲ್ ಜೊತೆ ನಂದಿನಿ ವಿಲೀನ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ: ಕೆಎಂಎಫ್ ನಂದಿನಿ ಕತ್ತು ಹಿಸುಕಿ, ಗುಜರಾತ್ನ ಅಮುಲ್ ಹಾಲು ಕುಡಿಸುವ ಕುತಂತ್ರದ ಯೋಜನೆಯ ಕ್ರಮವನ್ನು ಖಂಡಿಸಿ ಇಂದು ಅಗ್ರಹಾರದ ನಂದಿನಿ ಮಳಿಗೆ ಮುಂಭಾಗ ಕೆಎಂಎಫ್ ನಂದಿನಿ ಉಳಿಸಿ ಎಂದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜಸ್ ಲೋಕೇಶ್ ಗೌಡ, ಕರ್ನಾಟಕದ ರೈತರು ಕಷ್ಟಪಟ್ಟು ಬೆವರು ಹರಿಸಿ ಬೆಳೆಸಿದ ನಂದಿನಿ ಬ್ರಾಂಡ್ ಅನ್ನು ಮುಗಿಸಲೆಂದೇ, ಅಮುಲ್ ಗುಜರಾತಿ ಹಾಲು ಮೊಸರನ್ನು ರಾಜ್ಯಕ್ಕೆ ತರಲಾಗುತ್ತಿದೆ. ಕರ್ನಾಟಕದ ರೈತರನ್ನು ಭಿಕ್ಷುಕರನ್ನಾಗಿಸುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು.
ಅದೆಷ್ಟೋ ಮನೆಗಳು ನಮ್ಮ ರಾಜ್ಯದಲ್ಲಿ ಹೈನುಗಾರಿಕೆಯಿಂದಲೇ ಸದೃಢವಾಗಿದೆ. ಕೆಎಂಎಫ್ ಸಾವಿರಾರು ರೈತರಿಗೆ, ಕನ್ನಡಿಗರಿಗೆ ಉದ್ಯೋಗ ನೀಡಿ ಭವಿಷ್ಯ ರೂಪಿಸಿಕೊಟ್ಟಿದೆ. ಇದು ಕನ್ನಡಿಗರ ಭಾವನಾತ್ಮಕ, ಸ್ವಾಭಿಮಾನದ ಬ್ರಾಂಡ್. ಜೊತೆಗೆ ಪುನೀತ್ ರಾಜ್ಕುಮಾರ್ ರಾಯಭಾರಿಯಾಗಿ ರೈತರ ಬೆನ್ನೆಲುಬಾಗಿದ್ದರು ಎಂದರು.
ಅಮಿತ್ ಶಾ ಅವರು ಮಂಡ್ಯದ ಕಾರ್ಯಕ್ರಮ ಒಂದಕ್ಕೆ ಆಗಮಿಸಿದ್ದಾಗ ಈ ವಿಲೀನದ ಬಗ್ಗೆ ಮಾತನಾಡಿದ್ದರು. ತದ ನಂತರ ಇದರ ಬಗ್ಗೆ ಸಿಎಂ ಬೊಮ್ಮಾಯಿ ಹಾಗೂ ಮತ್ತಿತರ ಬಿಜೆಪಿ ಮುಖಂಡರು ನಂದಿನಿ ಅಮುಲ್ ವಿಲೀನದ ಪ್ರಶ್ನೆಯೇ ಇಲ್ಲ ಎಂದಿದ್ದರು. ಬಳಿಕ ಪರೋಕ್ಷವಾಗಿ ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ಹಿಂದಿಯಲ್ಲಿ ದಹಿ ಎಂದು ಬರೆಯಬೇಕೆಂದು ಕೇಂದ್ರದಿಂದ ಆದೇಶ ಹೊರಡಿಸಲಾಯಿತು. ಆಗ ಕನ್ನಡಿಗರು ವಿರೋಧ ವ್ಯಕ್ತಪಡಿಸಿದಾಗ ಆದೇಶವನ್ನು ಹಿಂಪಡೆಯಲಾಯಿತು ಎಂದು ಹೇಳಿದರು.
ಈಗ ಆನ್ಲೈನ್ನಲ್ಲಿ ಅಮುಲ್ ಹಾಲು, ಮೊಸರು ರಾಜ್ಯ ಮಾರುಕಟ್ಟೆಗೆ ಬಂದಿದ್ದು, ಜತೆಗೆ ಸದ್ದೇ ಇಲ್ಲದೆ, ಬೆಂಗಳೂರಿನಲ್ಲಿ ತಲೆ ಎತ್ತುತ್ತಿದೆ. ಅಮುಲ್ನ ದೊಡ್ಡ ಡೈರಿ. ಕರ್ನಾಟಕದ ಮನೆ ಮಾತಾಗಿರುವ ಹಾಗೂ ದೇಶದ ಎರಡನೇ ಅತಿ ದೊಡ್ಡ ಸಂಸ್ಥೆ ಆದ ನಂದಿನಿಯನ್ನು ಮುಳುಗಿಸಲೆಂದು, ಅಲ್ಲಲ್ಲಿ ನಂದಿನಿ ಹಾಲು ಮೊಸರಿನ ಕೃತಕ ಅಭಾವ ಸೃಷ್ಟಿ ಮಾಡಲಾಗುತ್ತಿದೆ. ಹಾಗೆಯೇ ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ ಅಭಾವ ಸೃಷ್ಟಿಸಿ ಕೆಎಂಎಫ್ ನಂದಿನಿ ನಷ್ಟದಲ್ಲಿ ಇದೆ ಎಂದು ಕಾರಣ ನೀಡಿ ಅಮುಲ್ ಜೊತೆ ವಿಲೀನ ಮಾಡುವ ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.
ಹೀಗೆಯೇ ಹಿಂದೆ ರಾಜ್ಯದಲ್ಲಿ ಲಾಭದಲ್ಲಿದ್ದ ಕರ್ನಾಟಕದ ಬ್ಯಾಂಕ್ಗಳನ್ನು, ನಷ್ಟದಲ್ಲಿದ್ದ ಉತ್ತರ ಭಾರತದ ಬ್ಯಾಂಕ್ಗಳೊಂದಿಗೆ ವಿಲೀನ ಮಾಡಿದ್ದನ್ನು, ಅದರಲ್ಲೂ ವಿಶೇಷವಾಗಿ ನಮ್ಮ ಮಹಾರಾಜರು ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೈಸೂರ್ ಬ್ಯಾಂಕ್ ಅನ್ನು ಎಸ್ಬಿಐ ಜೊತೆ ವಿಲೀನ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೇ ರೀತಿ ನಂದಿನಿಯನ್ನು ಅಮುಲ್ ಜೊತೆ ವಿಲೀನಗೊಳಿಸಲು ಹುನ್ನಾರ ನಡೆಯುತ್ತಿವೆ. ಈ ವಿಲೀನವಾದರೆ ರಾಜ್ಯದ ರೈತರಿಗೆ ಅಪಾರ ನಷ್ಟ ಉಂಟಾಗುತ್ತದೆ ಎಂದು ಕಿಡಿಕಾರಿದರು.
ದೇಶದಲ್ಲಿ ಅಮುಲ್ನ ಏಕಸ್ವಾಮ್ಯದಿಂದ ರಾಜ್ಯದ ರೈತರು ತತ್ತರಿಸಿ ಹೋಗುತ್ತಾರೆ. ಅವರ ಹಾಲಿಗೆ ಒಳ್ಳೆಯ ಬೆಲೆ ಸಿಗದಂತಾಗುತ್ತದೆ. ಅಮುಲ್ನವರು ನಿಗದಿ ಮಾಡಿದ ಹಣವನ್ನೇ ಪಡೆಯಬೇಕಾಗುತ್ತದೆ. ಒಂದು ದೇಶ - ಒಂದು ಅಮುಲ್, ಒಂದೇ ಹಾಲು - ಒಂದೇ ಗುಜುರಾತ್ ಎನ್ನುವ ಅವರ ಉದ್ದೇಶ ಯಾರಿಗೂ ಹಿತಕರವಲ್ಲ. ಇದೊಂದು ಅನಾರೋಗ್ಯಕರ ಪೈಪೋಟಿ. ಆದ್ದರಿಂದ ರಾಜ್ಯದಲ್ಲಿರುವ ಎಲ್ಲರೂ ನಮ್ಮ ರೈತರ ಹೆಮ್ಮೆಯ ಕೆಎಂಎಫ್ ಬ್ರಾಂಡ್ನ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಸಿ, ಗುಜರಾತಿ ಅಮುಲ್ನ ಉತ್ಪನ್ನಗಳನ್ನು ತಿರಸ್ಕರಿಸುವ ಮೂಲಕ ರಾಜ್ಯದ ರೈತರ ಹಿತವನ್ನು ಕಾಪಾಡಬೇಕು ಎಂದು ಹಾಗೂ ಈ ವಿಲೀನಕ್ಕೆ ಮಾನ್ಯ ರಾಜ್ಯಪಾಲರು ಅವಕಾಶ ನೀಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ, ಸಿ ಎಚ್ ಕೃಷ್ಣಯ್ಯ, ಡಾ. ಶಾಂತರಾಜೇ ಅರಸ್, ಪ್ರಜೀಶ್ ಪಿ., ಗೋಲ್ಡ್ ಸುರೇಶ್, ರಾಧಾಕೃಷ್ಣ, ಕುಮಾರ್ ಗೌಡ, ಜೂ. ವಿಷ್ಣುವರ್ಧನ್, ಗಿರೀಶ್ ಗೌಡ, ಡಾ. ನರಸಿಂಹೇಗೌಡ, ಲತಾ ರಂಗನಾಥ್, ಅಂಬಾ ಅರಸ್, ಎಸ್ ಚಂದ್ರು, ಎಳನೀರು ರಾಮಣ್ಣ, ಗೊರೂರು ಮಲ್ಲೇಶ್ ಸಿದ್ದರಾಜು, ದರ್ಶನ್ ಗೌಡ, ಹನುಮಂತಯ್ಯ, ಸುಂದರಪ್ಪ ಗ್ರಾಪಂ, ಕೃಷ್ಣಮೂರ್ತಿ, ರಾಮನಾಯಕ, ರವಿ ನಾಯಕ್, ಶ್ರೀಕಂಠೇಗೌಡ ಇದ್ದರು.
ಇದನ್ನೂ ಓದಿ: ಅಮುಲ್ ರಾಜ್ಯ ಪ್ರವೇಶ: ಸಾಮಾಜಿಕ ಜಾಲತಾಣದಲ್ಲಿ ವಿರೋಧದ ಅಲೆ.. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಹೇಳುವುದೇನು?