ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ಜೆಡಿಎಸ್ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಪ್ರತಿಭಟನೆ ಬೆನ್ನಲ್ಲೆ ಜೆಡಿಎಸ್ ಕೂಡಾ ಪ್ರತಿಭಟನೆ ನಡೆಸಿ, ರೈತ ವಿರೋಧಿ ಕಾಯ್ದೆಗಳು ರದ್ದಾಗಲಿ ಎಂದು ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ, ಹಿರಿಯ ನಾಯಕ ಬಸವರಾಜ್ ಹೊರಟ್ಟಿ, ಪುಟ್ಟರಾಜ್, ಶ್ರೀಕಂಠೇಗೌಡ, ಶಿವಲಿಂಗೇಗೌಡ, ತಿಪ್ಪೇಸ್ವಾಮಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಇದೇ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ, ರೈತರ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಇದರ ವಿರುದ್ಧ ಜನಸಾಮಾನ್ಯರು ಧ್ವನಿ ಎತ್ತಿದ್ದಾರೆ. ಭಾರತ್ ಬಂದ್ ಯಶಸ್ವಿಯಾಗಿದೆ. ಈಗಲಾದರೂ ಕಾನೂನು ತರಲು ಹೊರಟಿರುವುದನ್ನು ಕೈಬಿಡಬೇಕು. ಕೇಂದ್ರ, ರಾಜ್ಯ ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಓದಿ: ಗುರುವಾರದಂದು ಚಳಿಗಾಲದ ಅಧಿವೇಶನ ಅಂತ್ಯಗೊಳಿಸಲು ಕಲಾಪ ಸಲಹಾ ಸಮಿತಿ ತೀರ್ಮಾನ
ಬಳಿಕ ಮಾತನಾಡಿದ ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ, ದೇಶದಲ್ಲಿ ರೈತರಿಗೆ ಹೆಚ್ಚು ಕಡಿಮೆಯಾದರೆ ರೈತರಿಗೆ ಪರಿಣಾಮ ಬೀರಲಿದೆ. ರೈತರ ಬದಲಿಗೆ ಹೊರಗಿನವರು ಕೃಷಿ ಭೂಮಿ ಖರೀದಿಸುವುದು ಸರಿಯಲ್ಲ. ಹಾಗಾಗಿ ರೈತ ವಿರೋಧಿ ಕಾಯ್ದೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಭಾರತ್ ಬಂದ್ಗೆ ನಾವೂ ಬೆಂಬಲ ವ್ಯಕ್ತಪಡಿಸಿದ್ದೇವೆ. ದೇವೇಗೌಡರು ಎಂದಿಗೂ ರೈತರ ಪರ ಧ್ವನಿ ಎತ್ತಿದ್ದವರು. ರೈತರಿಗೆ ನೈತಿಕ ಬೆಂಬಲ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ. ರೈತರನ್ನು ವಿರೋಧಿಸಿ ಯಾವುದೇ ಸರ್ಕಾರಗಳು ಉಳಿದಿಲ್ಲ. ಕೂಡಲೇ ರೈತ ವಿರೋಧಿ ಕಾಯ್ದೆ ಕೈಬಿಡಬೇಕು ಎಂದು ಒತ್ತಾಯಿಸಿದರು.