ಬೆಂಗಳೂರು: ಜೀತಪದ್ಧತಿಯನ್ನು ಬುಡ ಸಮೇತ ನಿರ್ಮೂಲನೆ ಮಾಡಲು ಸರ್ಕಾರ ಕಠಿಣ ಕಾನೂನನ್ನು ಜಾರಿಗೆ ತಂದರೂ ಕೂಡ ಇನ್ನೂ ಈ ಅನಿಷ್ಠ ಪದ್ಧತಿ ತೊಡೆದುಹಾಕಲು ಸಾಧ್ಯವಾಗುತ್ತಿದ್ದಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಒಂದೇ ಸ್ಥಳದಲ್ಲಿ ಜೀತ ಕಾರ್ಯ ಮಾಡುತ್ತಿದ್ದ 204 ಜನರನ್ನು ರಕ್ಷಣೆ ಮಾಡಲಾಗಿದೆ.
ಯಲಹಂಕ ತಾಲೂಕು ಹೆಸರಘಟ್ಟ ಹೊಬಳಿಯ ಕೊಂಡಶೆಟ್ಟಿಹಳ್ಳಿ ಗ್ರಾಮದಲ್ಲಿನ ಇಟ್ಟಿಗೆ ತಯಾರಿಕಾ ಕೇಂದ್ರದಲ್ಲಿ 204 ಜನ ಕಾರ್ಮಿಕರನ್ನ ಕೂಡಿ ಹಾಕಿಕೊಂಡು ದುಡಿಸಿಕೊಳ್ಳಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ರಘುಮೂರ್ತಿ ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಅಧಿಕಾರಿಗಳು ಸೇರಿದಂತೆ ಪೊಲೀಸರ ತಂಡ ಇಟ್ಟಿಗೆ ತಯಾರಿಕಾ ಕೇಂದ್ರದ ಮೇಲೆ ದಾಳಿ ನಡೆಸಿ 40 ಮಕ್ಕಳು ಸೇರಿದಂತೆ ಒಡಿಶಾ ಮೂಲದ 204 ಕಾರ್ಮಿಕರನ್ನ ರಕ್ಷಣೆ ಮಾಡಿದ್ದಾರೆ.
ದಿನಕ್ಕೆ 50 ರೂಪಾಯಿ ಸೇರಿದಂತೆ ವಾರಕ್ಕೆ 350ರೂ. ವೇತನದ ಆಧಾರದಲ್ಲಿ ಒಡಿಶಾದಿಂದ ಕಾರ್ಮಿಕರನ್ನ ಕರೆತಂದು ಇಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು. ಕಾರ್ಮಿಕರಿಗೆ ವಾಸಿಸಲು ಕೋಳಿ ಗೂಡಿನಷ್ಟು ಪ್ರದೇಶದಲ್ಲಿ ಚಿಕ್ಕ ಚಿಕ್ಕ ಗುಡಿಸಲು ನಿರ್ಮಾಣ ಮಾಡಿಕೊಡಲಾಗಿತ್ತು. ಸರಿಯಾದ ಶೌಚ ವ್ಯವಸ್ಥೆ ಕೂಡಾ ಕಲ್ಪಿಸಿರಲಿಲ್ಲ. ಇದರಿಂದಾಗಿ ಕಾರ್ಮಿಕರ ಸ್ಥಿತಿ ದಯನೀಯವಾಗಿತ್ತು ಎಂದು ಖಚಿತ ಮಾಹಿತಿ ಪಡೆದುಕೊಂಡ ಎನ್.ಜಿ.ಒ ಸಂಸ್ಥೆಯೊಂದು ನ್ಯಾಯಾಲಯದಲ್ಲಿ ದೂರು ದಾಖಲು ಮಾಡಿತ್ತು. ಈ ಹಿನ್ನೆಲೆ ದಾಳಿ ನಡೆಸಲಾಗಿದೆ.