ಬೆಂಗಳೂರು : ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿರುವ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ತಿದ್ದುಪಡಿ ವಿಧೇಯಕ 2022 ಮತ್ತು ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್ ನಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ವಿಧಾನ ಪರಿಷತ್ನ ಶಾಸನ ರಚನೆ ಕಲಾಪದಲ್ಲಿ ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿರುವ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ತಿದ್ದುಪಡಿ ವಿಧೇಯಕ 2022 ಅನ್ನು ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಮಂಡಿಸಿದರು. ಠೇವಣಿದಾರರ ಹಿತಾಸಕ್ತಿಗೆ ತಿದ್ದುಪಡಿ ತರಲಾಗಿದ್ದು, ಅಂಗೀಕರಿಸುವಂತೆ ಮನವಿ ಮಾಡಿದರು.
ಪತ್ರಿಪಕ್ಷಗಳಿಂದ ಸಲಹೆ : ಬಿಲ್ ಕುರಿತು ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಬುಲ್ಡೋಜರ್ ಅಂತೀರಾ, ಯುಪಿ ಮಾದರಿ ಅಂತಾ ಕೆಲವಕ್ಕೆ ಹೇಳುತ್ತೀರಾ? ಇಂತಾ ಕೇಸ್ನಲ್ಲಿ ಯಾಕೆ ಸುಮ್ಮನಿರುತ್ತೀರಾ ಎಂದು ಪ್ರಶ್ನಿಸಿ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಪ್ರಸ್ತಾಪಿಸಿದರು. ಬರೀ 5 ಲಕ್ಷ ಠೇವಣಿ ವಾಪಸ್ ನೀಡಿದರೆ ಹೇಗೆ? ಇಂತಹ ಹಗರಣದ ಎಲ್ಲ ಪ್ರಕರಣ ಸಿಬಿಐ ತನಿಖೆಗೆ ಕೊಡಿ ಎನ್ನುತ್ತಾ ಬಿಲ್‌ಗೆ ಸ್ವಾಗತ ಮಾಡಿದರು. ಪಕ್ಷಾತೀತವಾಗಿ ಹಲವು ಸದಸ್ಯರು ವಿಧೇಯಕಕ್ಕೆ ಸ್ವಾಗತ ಮಾಡಿ ಕೆಲವೊಂದು ಸಲಹೆ ನೀಡಿದರು.
ಮೂಲ ಬಿಲ್‌ಗೆ ಸಲಹೆ ಸೇರ್ಪಡೆ, ತಿದ್ದುಪಡಿ ಅಂಗೀಕಾರ : ಸದಸ್ಯರ ಸಲಹೆ ಬಳಿಕ ಮಾತನಾಡಿದ ಸಚಿವ ಮಾಧುಸ್ವಾಮಿ, ಸದಸ್ಯರ ಸಲಹೆ ಆಲಿಸಿದ್ದೇನೆ, ಮೂಲ ಬಿಲ್ನಲ್ಲಿ ಬೇಕಾದರೆ ಸಲಹೆ ಅಳವಡಿಸಿಕೊಳ್ಳೋಣ. ಈಗ ಸಣ್ಣ ತಿದ್ದುಪಡಿ ಇದೆ, ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು. ನಂತರ ವಿಧೇಯಕವನ್ನ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಬಗರ್ ಹುಕುಂ ಅರ್ಜಿ ಹಾಕಲು ಮತ್ತೊಂದು ಅವಕಾಶಕ್ಕೆ ಪರಿಷತ್ ಅಸ್ತು : ಕಂದಾಯ ಸಚಿವ ಆರ್.ಅಶೋಕ್ ಪರವಾಗಿ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್ನಲ್ಲಿ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಮಂಡಿಸಿದರು.
ಬಗರ್ ಹುಕುಂ ಅರ್ಜಿ ಹಾಕಲು ಮತ್ತೊಂದು ಅವಕಾಶ ಕಲ್ಪಿಸಲು ಜನರು, ಜನಪ್ರತಿನಿಧಿಗಳಿಂದ ಮನವಿ ಬಂದಿತ್ತು. ಹಾಗಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಸೀಮಿತವಾಗಿ ತಿದ್ದುಪಡಿ ತರಲಾಗಿದೆ. ಹಾಗಾಗಿ ಅನುಮತಿ ನೀಡುವಂತೆ ಮನವಿ ಮಾಡಿದರು. ಬಗರ್ ಹುಕುಂ ಅವಕಾಶ ದುರುಪಯೋಗ ಕುರಿತು ಪಕ್ಷಾತೀತವಾಗಿ ಸದಸ್ಯರು ಆತಂಕ ವ್ಯಕ್ತಪಡಿಸಿದರು. ವಿಧೇಯಕ ಬೆಂಬಲಿಸಿ ದುರುಪಯೋಗ ತಡೆಗೆ ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಸದಸ್ಯರ ಅಭಿಪ್ರಾಯದ ನಂತರ ಮಾತನಾಡಿದ ಮಾಧುಸ್ವಾಮಿ, ಗೋಮಾಳವನ್ನು ಬಗರ್ ಹುಕುಂನಲ್ಲಿ ಕೊಡುವುದಿಲ್ಲ, ನಗರ ವ್ಯಾಪ್ತಿ ಮಿತಿಯ ಒಳಗೂ ಇದು ಅನ್ವಯವಿಲ್ಲ, ನಗರ ಪ್ರದೇಶದಲ್ಲಿ ಸಕ್ರಮ ಮಾಡಿಕೊಡಲ್ಲ. ಊರು ಪಕ್ಕ ಸಾರ್ವಜನಿಕ ಉದ್ದೇಶದ ಜಾಗವನ್ನೂ ಬಗರ್ ಹುಕುಂಗೆ ನೀಡಲು ನಿರ್ಬಂಧಿಸಿದೆ. 4.38 ಎಕರೆ ಒಳಗಿರುವ ನಿಯಮದೊಂದಿಗೆ ಹಲವು ವರ್ಷಗಳಿಂದ ಇರುವ ಜನರಿಗೆ ಮಾತ್ರ ಅಕ್ರಮ ಸಕ್ರಮಕ್ಕೆ ಅವಕಾಶ ಕಲ್ಪಿಸಿದ್ದೇವೆ. ಡೀಮ್ಡ್ ಅರಣ್ಯದಲ್ಲಿ ನೋಟಿಫಿಕೇಷನ್ ಮಾಡಿ ಅದನ್ನು ಕಂದಾಯ ಜಾಗ ಎಂದು ಮಾಡಿದ್ದೇವೆ. ಹಾಗಾಗಿ ಬಿಲ್‌ಗೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು. ನಂತರ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.
ಇದನ್ನೂ ಓದಿ : ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ