ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಹುಡುಗನನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ನ ವಿಶೇಷ 'ನನ್ಹೆ ಫರಿಶ್ತೆ' ತಂಡ ರಕ್ಷಿಸಿದೆ.
ಅ.22 ರಂದು ಸಂಜೆ 5 ಗಂಟೆಯ ಸಮಯದಲ್ಲಿ ವ್ಯಕ್ತಿಯೊಬ್ಬರು ಬೆಂಗಳೂರು ನಗರ ನಿಲ್ದಾಣದ ಪ್ರವೇಶ ದ್ವಾರದಲ್ಲಿರುವ 'ನನ್ಹೆ ಫರಿಶ್ತೆ' ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ತಂಡವನ್ನು ಸಂಪರ್ಕಿಸಿ ತಮ್ಮ ಸೋದರಳಿಯ ಮನೆಯಿಂದ ಕಾಣೆಯಾಗಿದ್ದಾನೆ ಎಂದು ತಿಳಿಸಿದರು. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಾಲಕ ವಿಡಿಯೋ ಕಳುಹಿಸಿದ್ದ ಎಂದು ಮಾಹಿತಿ ನೀಡಿದರು ಎಂದು ಆರ್ಪಿಎಫ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಹುಡುಗನ ಸಂಪೂರ್ಣ ವಿಡಿಯೋವನ್ನು ನೋಡಿದ, ತಂಡದ ಉಸ್ತುವಾರಿ ವಹಿಸಿದ್ದ ಅಧಿಕಾರಿ ತಕ್ಷಣವೇ ಹುಡುಗ ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿದ್ದು ರೈಲು ಇನ್ನೂ ಹೊರಡಬೇಕಿದೆ ಎಂದು ಗುರುತಿಸಲಾಗಿದೆ.
ತಕ್ಷಣ ಕೆಎಸ್‌ಆರ್ ಬೆಂಗಳೂರು ನಿಲ್ದಾಣದ ಇತರ ಆರ್ಪಿಎಫ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸಂದೇಶ ಕಳುಹಿಸಲಾಯಿತು. ನಿಲ್ದಾಣದಲ್ಲಿರುವ ಸಿಬ್ಬಂದಿಯ ವಾಟ್ಸಾಪ್ ಗ್ರೂಪ್‌ಗಳ ಮೂಲಕ ವಿಡಿಯೋ ಮತ್ತು ಫೋಟೋ ಪ್ರಸಾರ ಮಾಡಿ, ಮಗುವನ್ನು ಪತ್ತೆ ಮಾಡಲು 6 ತಂಡಗಳಾಗಿ ವಿಂಗಡಿಸಲಾಯಿತು.
ಹುಡುಕಾಟದ ಬಳಿಕ ರೈಲು ಸಂಖ್ಯೆ 06527 ಬೆಂಗಳೂರು ಸಿಟಿ-ನವದೆಹಲಿ ಎಕ್ಸ್‌ಪ್ರೆಸ್ ವಿಶೇಷ ಕೋಚ್ನಲ್ಲಿ ಬಾಲಕ ಪತ್ತೆಯಾಗಿದ್ದನು. 'ನನ್ಹೆ ಫರಿಶ್ತೆ' ತಂಡವು ಬಾಲಕನನ್ನು ಸುರಕ್ಷಿತವಾಗಿ ರಕ್ಷಿಸಿ ರೈಲ್ವೆ ನಿಲ್ದಾಣದಲ್ಲಿರುವ ಆರ್ಪಿಎಫ್ ಕಚೇರಿಗೆ ಕರೆತಂದಿತು. ಹುಡುಗನಿಗೆ ಆಪ್ತ ಸಮಾಲೋಚನೆ ಮತ್ತು ಕಾನೂನಾತ್ಮಕ ವಿಧಿವಿಧಾನಗಳ ನಂತರ ಆತನನ್ನು ಪೋಷಕರಿಗೆ ಒಪ್ಪಿಸಲಾಯಿತು ಎಂದು ಹಿರಿಯ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಅಧಿಕಾರಿಗಳು ಹೇಳಿದ್ದಾರೆ.