ಬೆಂಗಳೂರು: ಕೆಎಂಎಫ್ನಲ್ಲಿ ವಿವಿಧ ಹುದ್ದೆಗಳನ್ನು ಕೊಡಿಸುವುದಾಗಿ ಹಣ ಪಡೆದು, ನಕಲಿ ಆದೇಶ ಪ್ರತಿ ನೀಡಿ ವಂಚಿಸುತ್ತಿದ್ದ ಆರೋಪದಡಿ ಪ್ರಕಾಶ್ ಎಂಬವರನ್ನು ಆಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಕೆಎಂಎಫ್ನ ವಿವಿಧ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆದಿತ್ತು. ಪ್ರಕಾಶ್ ಅಭ್ಯರ್ಥಿಗಳಿಂದ ಹಣ ಪಡೆದು ಸರ್ಕಾರಿ ಲಾಂಛನ ನಕಲು ಮಾಡಿರುವ ನಕಲಿ ಆದೇಶ ಪ್ರತಿ ನೀಡುತ್ತಿದ್ದರು. ಚಿಕ್ಕಬಳ್ಳಾಪುರ ಮೂಲದ ಚರಣ್ ರಾಜ್ ಎಂಬಾತನಿಂದ 10 ಲಕ್ಷ ರೂ. ಪಡೆದಿದ್ದ ಇವರು, ತಾಂತ್ರಿಕ ಅಧಿಕಾರಿ ಹುದ್ದೆಯ ನೇಮಕಾತಿ ಆದೇಶದ ನಕಲಿ ಪ್ರತಿ ನೀಡಿ ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ. ನಕಲಿ ಪ್ರತಿ ಗಮನಿಸಿದ್ದ ಕೆಎಂಎಫ್ ಅಧಿಕಾರಿಗಳು ಆಡುಗೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಆಡುಗೋಡಿ ಪೊಲೀಸರು ತಿಳಿಸಿದ್ದಾರೆ.
ಮೊದಲ ಚಿತ್ರ ನಿರ್ಮಾಣದ ಕನಸು ಕಂಡವನಿಗೆ ಶಾಕ್!: ಸಿನಿಮಾಗಳಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಪ್ರಕಾಶ್, ಇತ್ತೀಚೆಗೆ ನಟ ಪ್ರಮೋದ್ ಶೆಟ್ಟಿ ಅಭಿನಯದಲ್ಲಿ 'ಶಭಾಷ್ ಬಡ್ಡಿ ಮಗನೇ' ಹೆಸರಿನ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲದೇ ಕಳೆದ ಅಕ್ಟೋಬರ್ನಲ್ಲಿ ಸಿನಿಮಾ ಸೆಟ್ಟೇರಿದ್ದು, ತಮ್ಮ ಪುತ್ರನ ಹಿಸರಿನಲ್ಲೇ ಚಿತ್ರ ನಿರ್ಮಾಣವಾಗುತ್ತಿತ್ತು. ಸದ್ಯ ನಿರ್ಮಾಪಕನ ಬಂಧನವಾಗುತ್ತಿದ್ದಂತೆ ಸಿನಿಮಾ ಕೆಲಸಗಳು ಕೂಡ ಅರ್ಧಕ್ಕೆ ನಿಂತಿವೆ.
ಇದನ್ನೂ ಓದಿ: ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದ 'ಪಠಾಣ್': ಇಷ್ಟೊಂದು ಕಲೆಕ್ಷನ್!