ಬೆಂಗಳೂರು : ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆಗೂ ಮುನ್ನವೇ ಹಲವಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಬಂಡಾಯದ ಬಿಸಿ ತಟ್ಟತೊಡಗಿದೆ. ಲಕ್ಷಾಂತರ ರೂಪಾಯಿ ಶುಲ್ಕ ನೀಡಿ ಅರ್ಜಿ ಸಲ್ಲಿಸಿರುವ ಕಾರ್ಯಕರ್ತರು ತಾವು ಪ್ರಮುಖ ಟಿಕೆಟ್ ಆಕಾಂಕ್ಷಿತರೆಂದು ಚುನಾವಣೆಗೆ ಸಿದ್ಧತೆ ನಡೆಸಿರುವುದು ಕಾಂಗ್ರೆಸ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಭ್ಯರ್ಥಿಗಳ ಮೊದಲ ಕಂತಿನ ಪಟ್ಟಿ ಪ್ರಕಟಿಸಲು ಕಾಂಗ್ರೆಸ್ ಕಳೆದ ನವೆಂಬರ್ ತಿಂಗಳಲ್ಲಿ ಆಕಾಂಕ್ಷಿತರಿಂದ ಅರ್ಜಿ ಆಹ್ವಾನಿಸಿತ್ತು. ಅದೀಗ ಹಲವಾರು ವಿಧಾನಸಭೆ ಕ್ಷೇತ್ರಗಳಲ್ಲಿ ಬಂಡಾಯ ಚಟುವಟಿಕೆಗೆ ದಾರಿ ಮಾಡಿಕೊಟ್ಟಿದೆ.
ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭಾ ಕ್ಷೇತ್ರಗಳಲ್ಲಿ 1ರಿಂದ 25 ಜನರ ತನಕ ಅರ್ಜಿಗಳು ಬಂದಿದ್ದು, ಎಲ್ಲರೂ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಕ್ಷೇತ್ರದಲ್ಲಿನ ಕಾಂಗ್ರೆಸ್ ಹಿರಿಯ ನಾಯಕರು, ಹಾಲಿ ಶಾಸಕರು, ಮಾಜಿ ಸಚಿವರು ಹಾಗೂ ಪ್ರಭಾವಿ ಮುಖಂಡರನ್ನು ಮೀರಿಸುವ ಪ್ರಮಾಣದಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲದೇ, ಕ್ಷೇತ್ರದಲ್ಲಿ ತಾವು ಸಹ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿಕೊಂಡು ಪ್ರಚಾರ ನಡೆಸುತ್ತಿದ್ದಾರೆ.
ಅರ್ಜಿ ಸಲ್ಲಿಸಿದ ಬಳಿಕ, ತಾವು ಪ್ರಮುಖ ಆಕಾಂಕ್ಷಿಗಳಾಗಿದ್ದೇವೆ. ನಮಗೇ ಟಿಕೆಟ್ ಸಿಗಲಿದೆ ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ತಮಗೆ ಮತ ನೀಡುವಂತೆ ಪಕ್ಷದ ಕಾರ್ಯಕರ್ತರು ಮತ್ತು ಮತದಾರರನ್ನು ಭೇಟಿ ಮಾಡಿ ಮನವಿ ಮಾಡುತ್ತಿರುವುದು ಕೆಪಿಸಿಸಿಗೆ ಹೊಸ ಸಮಸ್ಯೆ ತಂದೊಡ್ಡಿದೆ.
ಆಕಾಂಕ್ಷಿತರಿಂದ ಪ್ರಚಾರ: ಟಿಕೆಟ್ ಅರ್ಜಿ ಹೆಸರಿನಲ್ಲಿ ಹಣ ಸಂಗ್ರಹಿಸಲು ಮಾಡಿರುವ ಪ್ಲಾನ್ ಈಗ ಕಾಂಗ್ರೆಸ್ಗೆ ತಿರುಗುಬಾಣವಾಗಿ ಪರಿಣಮಿಸಿದೆ. ಪಕ್ಷವು ಅರ್ಜಿ ಆಹ್ವಾನಿಸಿ, ಸಾಮಾನ್ಯ ವರ್ಗದವರಿಗೆ ಒಂದು ಅರ್ಜಿಗೆ 2 ಲಕ್ಷ ರೂ. ಹಾಗೂ ಎಸ್ಸಿ - ಎಸ್ಟಿ ವರ್ಗದವರಿಗೆ 1 ಲಕ್ಷ ರೂ. ಶುಲ್ಕ ನೀಡಬೇಕು ಎನ್ನುವ ನಿಯಮ ವಿಧಿಸಿತ್ತು. ಇದರಿಂದ ಪಕ್ಷಕ್ಕೆ ಸುಮಾರು 20 ಕೋಟಿ ರೂ.ಗೂ ಹೆಚ್ಚಿನ ಹಣ ಸಂಗ್ರಹವಾಗಿದೆ. ಆದರೆ, ದೊಡ್ಡ ಪ್ರಮಾಣದ ಬಂಡಾಯ ಚಟುವಟಿಕೆಗಳ ಸೃಷ್ಟಿಗೂ ಇದು ಕಾರಣವಾಗಿದೆ.
ಟಿಕೆಟ್ಗಾಗಿ ಲಕ್ಷಗಟ್ಟಲೇ ಹಣ ನೀಡಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿತರು ಪಕ್ಷದ ಅಭ್ಯರ್ಥಿಯಾಗುವುದು ಖಚಿತ. ತಮಗೆ ಟಿಕೆಟ್ ಸಿಗಲಿದೆ ಎಂದು ಕಾರ್ಯಕರ್ತರನ್ನು ನಂಬಿಸಿ, ಪ್ರಚಾರದಲ್ಲಿ ತೊಡಗಿರುವುದು ಪಕ್ಷಕ್ಕೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಪಕ್ಷವು ಒಂದು ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ನೀಡಲು ಸಾಧ್ಯವಿರುವುದರಿಂದ ಉಳಿದ ಆಕಾಂಕ್ಷಿಗಳ ಅರ್ಜಿ ಪರಿಗಣಿಸುವುದು ಕಷ್ಟವಾಗಿದೆ. ಪಕ್ಷದ ಹಾಲಿ ಶಾಸಕರಿರುವ ಕ್ಷೇತ್ರಗಳಲ್ಲಿ ಸಹ ಪಕ್ಷದ ಕಾರ್ಯಕರ್ತರು ಮತ್ತು ಇತರ ಮುಖಂಡರು ಅರ್ಜಿ ಹಾಕಿದ ಕಾರಣವನ್ನೇ ಮುಂದಿಟ್ಟುಕೊಂಡು ತಮಗೆ ಟಿಕೆಟ್ ಸಿಗುತ್ತದೆ. ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ಕೈತಪ್ಪಲಿದೆ ಎಂದು ಹೇಳುತ್ತಿರುವುದು ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
ಡಿಕೆಶಿ ಎಚ್ಚರಿಕೆ : ಟಿಕೆಟ್ ಆಕಾಂಕ್ಷಿತರು ಬಂಡಾಯ ಚಟುವಟಿಕೆಗಳಲ್ಲಿ ತೊಡಗಿರುವ ನಿದರ್ಶನಗಳ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಹಲವಾರು ದೂರುಗಳು ಸ್ಥಳೀಯ ಮುಖಂಡರಿಂದ ಬಂದಿದೆ ಎಂದು ಹೇಳಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈಗಾಗಲೇ ಹಲವು ಬಾರಿ ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಆಕಾಂಕ್ಷಿತರು ಇದಕ್ಕೆ ಜಗ್ಗದೇ ಲಕ್ಷಾಂತರ ರೂಪಾಯಿ ಶುಲ್ಕ ನೀಡಿರುವ ತಮಗೆ ಪಕ್ಷವು ಟಿಕೆಟ್ ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಟಿಕೆಟ್ನ್ನು ಕೇಳಿ ಪಡೆಯುವುದು ತಮ್ಮ ಮೂಲಭೂತ ಹಕ್ಕು ಎನ್ನುವ ರೀತಿಯಲ್ಲಿ ಪ್ರತಿಪಾದನೆ ಮಾಡತೊಡಗಿದ್ದಾರೆ. ಕಾರ್ಯಕರ್ತರ ಈ ಧೋರಣೆ ಬಂಡಾಯ ಚಟುವಟಿಕೆಗಳಿಗೆ ಅವಕಾಶ ನೀಡಿದಂತಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ನನ್ನನ್ನು ಗೌರವಯುತವಾಗಿ ಪಕ್ಷದಿಂದ ತೆಗೆಯಿರಿ, ಇಲ್ಲವಾದರೆ ಕಾಂಗ್ರೆಸ್ಗೆ ಹಾನಿಯಾಗುತ್ತೆ: ಕೆಜಿಎಫ್ ಬಾಬು ವಾರ್ನಿಂಗ್
ಕೆಜಿಎಫ್ ಬಾಬು ಅಮಾನತು: ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ ಕೆಜಿಎಫ್ ಬಾಬು ಟಿಕೆಟ್ ಆಕಾಂಕ್ಷಿ ಎಂದು ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು ಪಕ್ಷಕ್ಕೆ ಇರಿಸು ಮುರುಸು ಉಂಟಾಗಿತ್ತು. ಕಳೆದ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಕೆಜಿಎಫ್ ಬಾಬುಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಆದರೆ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಬಾಬು ಚಿಕ್ಕಪೇಟೆ ಕ್ಷೇತ್ರದ ಮೇಲೆ ಕಣ್ಣಿಟ್ಟು, ಟಿಕೆಟ್ ನಿರೀಕ್ಷೆಯಲ್ಲಿ ಪಕ್ಷ ಸಂಘಟನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಕೆಜಿಎಫ್ ಬಾಬುರ ಈ ಕ್ರಮ ಚಿಕ್ಕಪೇಟೆ ಕ್ಷೇತ್ರದ ಉಳಿದ ಟಿಕೆಟ್ ಆಕಾಂಕ್ಷಿಗಳಲ್ಲಿ ಬೇಸರ ಉಂಟು ಮಾಡಿದ್ದು, ಅವರು ಪಕ್ಷದ ಮುಖಂಡರಿಗೆ ದೂರು ನೀಡಿದ್ದರು. ಇದರ ಪರಿಣಾಮ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೆಜಿಎಫ್ ಬಾಬುಗೆ ಎಚ್ಚರಿಕೆ ನೀಡಿದ ನಂತರವೂ ಅದಕ್ಕೆ ಅವರು ಬಗ್ಗದಿದ್ದಾಗ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷರಾದ ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಅವರು ಕೆಜಿಎಫ್ ಬಾಬುರನ್ನ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಇದು ಕೇವಲ ಒಂದು ಉದಾಹರಣೆಯಾದರೆ, ರಾಜ್ಯಾದ್ಯಂತ ಹಲವಾರು ಕ್ಷೇತ್ರಗಳಲ್ಲಿ ಅರ್ಜಿ ಸಲ್ಲಿಸಿದ ಆಕಾಂಕ್ಷಿತರು ಟಿಕೆಟ್ ನಿರೀಕ್ಷೆಯಲ್ಲಿಯೇ ತಾವೇ ಅಭ್ಯರ್ಥಿಯೆಂದು ಪ್ರಚಾರದಲ್ಲಿ ತೊಡಗಿಕೊಂಡಿರುವುದು ನಿಜವಾದ ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿದ್ದವರಿಗೆ ತೊಡಕುಂಟಾಗಿದೆ. ಭಿನ್ನಾಭಿಪ್ರಾಯ ಮತ್ತು ಕಾರ್ಯಕರ್ತರು, ಮುಖಂಡರ ನಡುವೆ ಮನಸ್ತಾಪಗಳಿಗೆ ವೇದಿಕೆಯಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದಿಂದ ಕೆಜಿಎಫ್ ಬಾಬು ಅಮಾನತು: ಕೆಪಿಸಿಸಿ ಆದೇಶ