ಬೆಂಗಳೂರು: ಅತ್ಯಂತ ರೋಚಕ ಪಂದ್ಯದಲ್ಲಿ ಯು ಮುಂಬಾ ವಿರುದ್ಧ 30-28 ಅಂತರದಲ್ಲಿ ಜಯ ಗಳಿಸಿದ ಪುಣೇರಿ ಪಲ್ಟನ್ ತಂಡ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರೋ ಕಬಡ್ಡಿ ಲೀಗ್ ಸೂಪರ್ ಸಂಡೆ ಮರಾಠ ಡರ್ಬಿ ಗೆದ್ದು ಬೀಗಿತು.
ಅಸ್ಲಾಮ್ ಇನಾಂದಾರ್ (9), ಮೋಹಿತ್ ಗೋಯತ್ (5) ರೈಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದರೆ, ಟ್ಯಾಕಲ್‌ನಲ್ಲಿ ನಾಯಕ ಫಜಲ್ ಅಚ್ರತಲಿ 4 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಮೊಹಮ್ಮದ್ ನಬೀಭಾಕ್ಷ್ ರೈಡಿಂಗ್‌ನಲ್ಲಿ ಗಳಿಸಿದ 4 ಅಂಕ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಇದರೊಂದಿಗೆ ಪುಣೇರಿ ಪಲ್ಟಲ್ ಋತುವಿನ ಮೊದಲ ಜಯ ದಾಖಲಿಸಿತು.
![ಪ್ರೊ ಕಬ್ಬಡಿ ಲೀಗ್](https://etvbharatimages.akamaized.net/etvbharat/prod-images/kn-bng-03-pro-kabaddi-league-puneri-pultan-win-7210969_16102022211954_1610f_1665935394_839.jpg)
ಯು ಮುಂಬಾ ಹಿಂದಿನ ಪಂದ್ಯಗಳನ್ನು ಹೋಲಿಸಿಕೊಂಡರೆ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿತು. ಗುಮಾನ್ ಸಿಂಗ್ (7) ಹಾಗೂ ಜೈ ಭಗವಾನ್ (5) ಉತ್ತಮವಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದರು. ಆದರೆ ದ್ವಿತಿಯಾರ್ಧದ ಅಂತಿಮ ಹಂತದಲ್ಲಿ ಪುಣೇರಿ ಪಲ್ಟನ್ ಗಳಿಸಿದ ರೈಡಿಂಗ್ ಅಂಕ ಪಂದ್ಯದ ಫಲಿತಾಂಶವನ್ನು ಬದಲಾಯಿಸಿತು. ಯು ಮುಂಬಾ ಆಡಿದ ನಾಲ್ಕು ಪಂದ್ಯಗಳಲ್ಲಿ 2 ಜಯ ಹಾಗೂ 2 ಸೋಲನುಭವಿಸಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಜಿದ್ದಾ ಜಿದ್ದಿನ ಪ್ರಥಮಾರ್ಧ: ಪೈಪೋಟಿಯಿಂದ ಕೂಡಿದ ಪ್ರಥಮಾರ್ಧದ ಪಂದ್ಯದಲ್ಲಿ ಎರಡೂ ತಂಡಗಳು ದಿಟ್ಟ ಹೋರಾಟ ನೀಡಿದ ಪರಿಣಾಮ ಪ್ರಥಮಾರ್ಧದಲ್ಲಿ ಪಂದ್ಯ 14-13ರಲ್ಲಿ ನಿಂತಿತ್ತು. ಪುಣೇರಿ ಪಲ್ಟನ್ ತಂಡ 1 ಅಂಕದಲ್ಲಿ ಮೇಲುಗೈ ಸಾಧಿಸಿತ್ತು. ಕನ್ನಡಿಗ ಕೋಚ್ ಬಿಸಿ ರಮೇಶ್ ಗರಡಿಯಲ್ಲಿ ಪಳಗಿದ ಪುಣೇರಿ ಪಲ್ಟನ್ ರೈಡಿಂಗ್‌ನಲ್ಲಿ 7 ಅಂಕ ಗಳಿಸಿದರೆ, ಯು ಮುಂಬಾ 8 ಅಂಕ ಗಳಿಸಿತು. ಟ್ಯಾಕಲ್‌ನಲ್ಲಿ ಪುಣೇರಿ ಪಲ್ಟನ್ 7 ಅಂಕ ಗಳಿಸಿ ಕಬಡ್ಡಿ ಅಭಿಮಾನಿಗಳಿಗೆ ಆಟದ ರಸದೌತಣ ನೀಡಿತು. ಯು ಮುಂಬಾ 4 ಅಂಕ ಗಳಿಸಿತು.
![ಪ್ರೊ ಕಬ್ಬಡಿ ಲೀಗ್](https://etvbharatimages.akamaized.net/etvbharat/prod-images/kn-bng-03-pro-kabaddi-league-puneri-pultan-win-7210969_16102022211954_1610f_1665935394_838.jpg)
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತಿ: ಭಾರತದ ಸಿನಿಮಾ ರಂಗದಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಿದ ಕನ್ನಡ ಸಿನಿಮಾ ಕಾಂತಾರದ ನಿರ್ದೇಶಕ, ನಾಯಕ ನಟ ರಿಷಬ್ ಶೆಟ್ಟಿ ಪಂದ್ಯ ಆರಂಭಕ್ಕೆ ಮುನ್ನ ರಾಷ್ಟ್ರಗೀತೆ ಹಾಡಿದ್ದು, ಇಂದಿನ ಪಂದ್ಯದ ವಿಶೇಷವಾಗಿತ್ತು. ರಿಷಬ್ ಶೆಟ್ಟಿ ಪಂದ್ಯ ವೀಕ್ಷಿಸಿ ಕಬಡ್ಡಿ ಅಭಿಮಾನಿಗಳಲ್ಲಿ ಹೊಸ ಉಲ್ಲಾಸ ತುಂಬಿದರು. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಜರಿದ್ದರು.
ಓದಿ: ಪ್ರೋ ಕಬಡ್ಡಿ ಲೀಗ್ 2022: ಪಿಂಕ್ ಪ್ಯಾಂಥರ್ಸ್, ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್‌ಗೆ ಜಯ