ಬೆಂಗಳೂರು: ರಾಜ್ಯ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) 2023ರ ನವೆಂಬರ್ 5ರಂದು ಒಂದೇ ದಿನ ಮೂರು ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿಗೊಳಿಸಿರುವುದರಿಂದ ಅಭ್ಯರ್ಥಿಗಳಲ್ಲಿ ಗೊಂದಲ ಉಂಟಾಗಿದ್ದು, ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕಗಳಲ್ಲಿ ನಿಗದಿ ಮಾಡಲು ಸೂಚನೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ರಾಜ್ಯ ಲೆಕ್ಕ ಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ 242 ಲೆಕ್ಕ ಸಹಾಯಕರು, ಸಹಕಾರ ಸಂಘಗಳ 47 ನಿರೀಕ್ಷಕರ ಹುದ್ದೆಗಳು ಮತ್ತು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 454 ಸಿವಿಲ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ ರಾಜ್ಯ ಲೋಕಸೇವಾ ಆಯೋಗವು 2023ರ ನವೆಂಬರ್ 5ರಂದು ಒಂದೇ ದಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿಪಡಿಸಿದ್ದು, ಈ ಪರೀಕ್ಷೆಗಳನ್ನು ಬೇರೆ ಬೇರೆ ದಿನಗಳಲ್ಲಿ ನಿಗದಿಗೊಳಿಸಲು ಕ್ರಮ ವಹಿಸುವಂತೆ ಹಲವಾರು ಅಭ್ಯರ್ಥಿಗಳು ತಮ್ಮನ್ನು ಕೋರಿರುವುದಾಗಿ ಸಚಿವರು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ ಐದು ವರ್ಷದಿಂದ ಹಲವಾರು ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯಾಗದೇ ಸಾವಿರಾರು ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಹಾಗೂ ವಯೋಮಿತಿಗೆ ಸೂಕ್ತವಾದ ಉದ್ಯೋಗ ಸಿಗದೇ ಅನ್ಯಾಯಕ್ಕೆ ಒಳಗಾಗಿದ್ದಾರೆ. ಸರ್ಕಾರಿ ಉದ್ಯೋಗಕ್ಕೆ ಸೇರ ಬಯಸಿ ಅರ್ಜಿ ಆಹ್ವಾನಿಸಲಾಗಿರುವ ಪ್ರತಿಯೊಂದು ನೇಮಕಾತಿಗಳಿಗೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ದೀರ್ಘ ಕಾಲದಿಂದ ತಯಾರಿ ನಡೆಸಿದ್ದಾರೆ ಎಂದು ಪತ್ರದಲ್ಲಿ ಸಚಿವರು ಉಲ್ಲೇಖಿಸಿದ್ದು, ಈ ಕಾರಣದಿಂದ ಬೇರೆ ಬೇರೆ ಪರೀಕ್ಷೆಗಳಿಗೆ ಪ್ರತ್ಯೇಕವಾಗಿ ದಿನಾಂಕ ನಿಗದಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ನೇಮಕಾತಿ: ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ (KFCSC) ಖಾಲಿ ಇರುವ ಒಟ್ಟು 386 ಹುದ್ದೆಗಳ ಭರ್ತಿಗೆ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಈ ಹುದ್ದೆ ನೇಮಕಾತಿ ಭರ್ತಿಗೆ ತೀರ್ಮಾನಿಸಲಾಗಿದೆ. ವ್ಯವಸ್ಥಾಪಕರು, ಹಿರಿಯ ಮತ್ತು ಕಿರಿಯ ವ್ಯವಸ್ಥಾಪಕರು ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೆಎಫ್ಸಿಎಸ್ಸಿಯಲ್ಲಿ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳು, ನೇಮಕಾತಿ ವಿಧಾನ ಸೇರಿದಂತೆ ಇನ್ನಿತರ ಮಾಹಿತಿ ಕೆಳಗಿನಂತಿದೆ.
ಹುದ್ದೆಗಳ ವಿವರ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ
ಸಹಾಯಕ ವ್ಯವಸ್ಥಾಪಕರು : 10
ಗುಣಮಟ್ಟ ನಿರೀಕ್ಷಕರು : 23
ಹಿರಿಯ ಸಹಾಯಕರು (ಲೆಕ್ಕ): 33
ಹಿರಿಯ ಸಹಾಯಕರು: 57
ಕಿರಿಯ ಸಹಾಯಕರು: 263
ಒಟ್ಟು ಹುದ್ದೆಗಳು : 386
ಇದನ್ನೂ ಓದಿ: Government Jobs: ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ನೇಮಕಾತಿ; 386 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ