ಬೆಂಗಳೂರು : ಕೇಂದ್ರ ಬಜೆಟ್ ಅದಾನಿ-ಅಂಬಾನಿಗೆ ಮಾತ್ರ ಮಾಡಿದ ಬಜೆಟ್ ಆಗಿದೆ. ಹಮ್ ದೋ ಹಮಾರೆ ದೋ ಎಂಬ ಬಜೆಟ್ ಆಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಬಹಳಷ್ಟು ಹಣ ಸುರಿದು ಬರುತ್ತೆ ಅಂತಿದ್ದರು. ಆದರೆ, ಇಂದು ಬಜೆಟ್ನಲ್ಲಿ ಏನೂ ಬಂದಿಲ್ಲ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಆಯ್ಕೆಯಾದವರು. ಇನ್ನೂ ಮೂರು ನಾಲ್ಕು ಬಜೆಟ್ ಆಗಿ ಹೋಗಿದೆ. ಆದರೆ, ರಾಜ್ಯದ ಆಸೆ, ಆಕಾಂಕ್ಷೆ ಏನು ಅನ್ನೋದು ಅವರಿಗೆ ಗೊತ್ತಾಗಿಲ್ಲ ಎಂದು ಕಿಡಿ ಕಾರಿದರು.
ನಮ್ಮವರೇ ಸಂಸದರು ಇದ್ದಾರೆ. ನಮ್ಮವರೇ ಆದ ಹಣಕಾಸು ಸಚಿವೆ ಇದ್ದಾರೆ. ಏನಾದರು ಪ್ರಭಾವ ಬೀರಿ ರಾಜ್ಯಕ್ಕೆ ಏನಾದರು ತರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಏನೂ ಆಗಿಲ್ಲ. ಕನ್ನಡಿಗರ ಆಸೆಯನ್ನು ಮೋದಿಯವರ ಮುಂದೆ ಹೇಳಲು ಏಕೆ ಹೆದರುತ್ತಾರೆ ಅನ್ನೋದು ಗೊತ್ತಿಲ್ಲ.
ನಮ್ಮ ಎಂಪಿಗಳು ಅಷ್ಟು ಅಸಮರ್ಥರಾ?. ಅಷ್ಟು ಹೆದರಿಕೆ ಇದೆಯಾ? ನಾವೇನು ವೈಯಕ್ತಿಕ ಆಸ್ತಿ ಪಾಲನ್ನು ಕೇಳುತ್ತಿದ್ದೇವಾ?. ಆರು ಕೋಟಿ ಜನರ ಪ್ರತಿನಿಧಿಗಳಾಗಿ ಕನ್ನಡಿಗರ ಧ್ವನಿಯಾಗಿ ಕೇಳಲು ಆಗುತ್ತಿಲ್ಲ ಅನ್ನೋದು ನೋವಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಇದು ಯುವಕರ ಬಜೆಟ್ ಅಲ್ಲ. ಮಹಿಳೆಯರ ಬಜೆಟ್ಟೂ ಅಲ್ಲ. ಎಸ್‌ಸಿ, ಎಸ್‌ಟಿ ಅವರ ಬಜೆಟ್ ಅಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿ ಎಂದಿದ್ದ ಅವರು ಈಗ ಅರವತ್ತು ಲಕ್ಷ ಉದ್ಯೋಗ ಸೃಷ್ಟಿ ಎಂದು ಒಪ್ಪಿದ್ದಾರೆ. ಅವೈಜ್ಞಾನಿಕ ಲಾಕ್ಡೌನ್ನಿಂದ 25 ಕೋಟಿ ಜನ ವಾಪಸ್ ಬಡತನ ರೇಖೆಗಿಂತ ಕೆಳಕ್ಕೆ ಹೋಗಿದ್ದಾರೆ. ಅದರ ಬಗ್ಗೆ ಏನೂ ಪ್ರಸ್ತಾಪ ಇಲ್ಲ ಎಂದು ಕಿಡಿ ಕಾರಿದರು.
ಓದಿ: ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ