ಬೆಂಗಳೂರು: ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ 600ಕ್ಕೂ ಹೆಚ್ಚು ಭರವಸೆ ನೀಡಿದ್ದು, ಶೇ.10ರಷ್ಟು ಭರವಸೆ ಕೂಡ ಈಡೇರಿಸಿಲ್ಲ. ಕಾಂಗ್ರೆಸ್ ಪಕ್ಷ ಅಭಿಯಾನದ ಮೂಲಕ ಇಂದು 50ನೇ ಪ್ರಶ್ನೆ ಕೇಳುತ್ತಿದ್ದು, ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಪೇಸಿಎಂ ಅಭಿಯಾನದ ಜತೆಗೆ ನಾವು ಸೇಸಿಎಂ ಆಂದೋಲನವನ್ನು ನಡೆಸಬೇಕಿದೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ಹೊನ್ನಾವರ ನ್ಯಾಯಾಲಯದಲ್ಲಿ ಪರೇಶ್ ಮೇಸ್ತ ಅವರ ಸಾವಿನ ಪ್ರಕರಣದಲ್ಲಿ ಸಿಬಿಐ ತನ್ನ ವರದಿ ಸಲ್ಲಿಸಿದೆ. ಬಿಜೆಪಿ ಸುಳ್ಳಿನ ಕಾರ್ಖಾನೆ ಎಂಬುದು ಎಲ್ಲರಿಗೂ ಗೊತ್ತು. ಈ ಸುಳ್ಳಿನ ಕಾರ್ಖಾನೆಯಿಂದ ರಾಜ್ಯದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಜತೆಗೆ ನಮ್ಮ ಯುವಕರ ಭವಿಷ್ಯ ನಿರ್ನಾಮವಾಗುತ್ತಿದೆ. ಬಿಜೆಪಿಯವರು ಯುವಕರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆ. ತಮ್ಮ ರಾಜಕೀಯ ದುರುದ್ದೇಶಕ್ಕೆ ಯುವಕರನ್ನು ಬಿಜೆಪಿ ದಾಳಗಳಾಗಿ ಬಳಸಿಕೊಳ್ಳುತ್ತಿದೆ. ಆ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕೆಸರಿ ಶಾಲು ಹಾಕಿ ಯುವಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ: ಯುವಕರಿಗೆ ಶಿಕ್ಷಣ, ಉದ್ಯೋಗ ನೀಡುವ ಬದಲು ಅವರ ಹೆಗಲಿಗೆ ಕೇಸರಿ ಶಾಲು ಹಾಕಿ ಅವರಿಗೆ ಧರ್ಮ ರಕ್ಷಕ ಹಾಗೂ ಗೋರಕ್ಷಕ ಎಂಬ ಬಿರುದು ನೀಡುತ್ತಿದ್ದಾರೆ. ಕಾಂಗ್ರೆಸ್ ಆರಂಭದಿಂದಲೂ ಬಿಜೆಪಿ ಯುವಕರ ದಾರಿ ತಪ್ಪಿಸುತ್ತಿದೆ, ಭವಿಷ್ಯದ ಜತೆ ಚೆಲ್ಲಾಟವಾಡಿ, ಅವರ ಭವಿಷ್ಯ ನಾಶ ಮಾಡುತ್ತಿದೆ ಎಂದು ಹೇಳುತ್ತಲೇ ಬಂದಿದ್ದೆ. ಆದರೆ ಇಂದು ಪರೇಶ್ ಮೇಸ್ತ ಅವರ ಸಾವಿನ ಬಗ್ಗೆ ಸಿಬಿಐ ವರದಿ ಬಂದಿದ್ದು, ಈ ಸಾವು ಹೇಗೆ ಸಂಭವಿಸಿದೆ ಇದರಲ್ಲಿ ಯಾರು ಹೇಗೆ ರಾಜಕೀಯ ಮಾಡಿದ್ದಾರೆ ಎಂಬ ಅಂಶ ವರದಿಯಲ್ಲಿ ಸ್ಪಷ್ಟವಾಗಿದೆ ಎಂದರು.
ಸುಳ್ಳಿನ ಕಂತೆ : ಪರೇಶ್ ಮೇಸ್ತ ಅವರ ಕೈ ಕತ್ತರಿಸಲಾಗಿತ್ತು, ಆತನ ಕೈಯಲ್ಲಿ ಜೈ ಶ್ರೀರಾಮ ಎಂಬ ಟ್ಯಾಟೂ ಇತ್ತು, ಕುದಿಯುವ ಎಣ್ಣೆ ಹಾಕಿದ್ದಾರೆ, ಕಣ್ಣುಗುಡ್ಡೆ ಕೀಳಲಾಗಿದೆ ಎಂಬ ಮಾಹಿತಿಯನ್ನು ಬಿಜೆಪಿಯವರು ಘಟನೆ ನಡೆದ 24 ಗಂಟೆಯಲ್ಲಿ ಹೇಳಿದ್ದರು. ಆದರೆ ದೇಹ ಸಿಕ್ಕಾಗ ಕೈ ಇತ್ತು ದೇಹದಲ್ಲಿ ಸುಟ್ಟಗಾಯಗಳಿರಲಿಲ್ಲ, ಶಿವಾಜಿ ಟ್ಯಾಟು ಇತ್ತು, ಕಣ್ಣುಗಳೂ ಹಾನಿಯಾಗಿರಲಿಲ್ಲ. ಇದರಿಂದಲೇ ತಿಳಿಯುತ್ತದೆ ಬಿಜೆಪಿಗರು ಎಷ್ಟು ಸುಳ್ಳುಹೇಳುತ್ತಾರೆ ಎಂದು ಹೇಳಿದರು.
ಸಿಬಿಐ ಯಾರ ಕೆಳಗಿದೆ : ಕಾಂಗ್ರೆಸ್ ಸಾಕ್ಷಿ ನಾಶ ಮಾಡಿದ್ದಕ್ಕೆ ಸಿಬಿಐ ಈ ರೀತಿ ವರದಿ ನೀಡಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ಸಿಬಿಐ ಯಾರ ಕೆಳಗೆ ಇದ್ದಾರೆ? ಅವರ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದಲ್ಲಿ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಈಗಿನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಸಮರ್ಥರು. ಕಳೆದ ಮೂರ್ನಾಲ್ಕು ವರ್ಷದಿಂದ ಇವರೇ ಅಧಿಕಾರದಲ್ಲಿದ್ದರೂ ಸಾಕ್ಷಿ ನೀಡಲು ಆಗಿಲ್ಲ. ಸಿಬಿಐ ವರದಿಯಲ್ಲಿ ಪ್ಯಾರಾ 16.21ನಿಂದ 16.23ವರೆಗೆ ನೋಡಿ ಎಲ್ಲ ಸಾಕ್ಷ್ಯಾಧಾರ ಎಲ್ಲಿಂದ ಕಲೆ ಹಾಕಿದ್ದಾರೆ, ಎಲ್ಲದರ ವಿಚಾರಣೆ ಮಾಡಿದ ನಂತರ ಈ ವರದಿ ನೀಡಲಾಗಿದೆ ಎಂದು ತಿಳಿಸಲಾಗಿದೆ ಎಂದರು.
ಯಾವ ಲೋಪಕ್ಕೆ ಮರು ತನಿಖೆ: ಈ ಪ್ರಕರಣ ಮರುತನಿಖೆ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ಈ ಸಿಬಿಐ ವರದಿಯಲ್ಲಿ ಯಾವ ಲೋಪವಿದೆ? ಯಾವ ಆಧಾರದ ಮೇಲೆ ಮರು ತನಿಖೆಗೆ ನೀಡುತ್ತಾರೆ? ಈ ವರದಿ ಸರ್ಕಾರದ ಬಳಿ ಇಲ್ಲವೇ? ಅವರು ಮಾಧ್ಯಮಗೋಷ್ಟಿ ಕರೆದು ಇದರ ಲೋಪಗಳನ್ನು ಹೇಳಲಿ. ನನ್ನ ಪ್ರಶ್ನೆ ಬಿಜೆಪಿ ನಾಯಕರಿಗೆ ಈ ಹತ್ಯೆ ಬಗ್ಗೆ ಮಾಹಿತಿ ಸಿಕ್ಕಿದ್ದು ಹೇಗೆ? ಅವುಗಳನ್ನು ಬಹರಂಗವಾಗಿ ಇಟ್ಟು, ಅವುಗಳನ್ನು ತನಿಖಾ ಸಂಸ್ಥೆಗೆ ನೀಡಿ ನಂತರ ಮರುತನಿಖೆಗೆ ಆಗ್ರಹಿಸಲಿ. ಯುವಕರ ಭವಿಷ್ಯದ ಜತೆ ಚೆಲ್ಲಾಟವಾಡುವುದೇ ನಿಮ್ಮ ಸಂಕಲ್ಪ ಯಾತ್ರೆಯೇ?’ ಎಂದು ಪ್ರಶ್ನಿಸಿದರು.
ಹಗರಣಗಳ ತನಿಖೆ ಬಿಟ್ಟು ಪೇಸಿಎಂಗೆ ನೋಟಿಸ್ : ಪೇಸಿಎಂ ಅಭಿಯಾನದಲ್ಲಿ ಸಿಸಿಬಿ ನೊಟೀಸ್ ಬಗ್ಗೆ ಕೇಳಿದಾಗ, ಆ ನೊಟೀಸ್ಗೆ ಲಿಖಿತ ಉತ್ತರ ನೀಡಬಹುದು. ದುರ್ದೈವ ಎಂದರೆ ಪೇಸಿಎಂ ಅಭಿಯಾನ ಮಾಡಿದ್ದು ಯಾರು? ಪೋಸ್ಟರ್ ಅಂಟಿಸಿದವರು ಯಾರು ಎಂಬುದು ಗೊತ್ತಿದೆ. ಆದರೂ ಇದರ ತನಿಖೆಯನ್ನು ಸಿಸಿಬಿಗೆ ನೀಡಿದ್ದಾರೆ. ಆದರೆ ಪಿಎಸ್ಐ ಹಗರಣ, ಕೆಪಿಟಿಸಿಎಲ್, ಪಿಡಬ್ಲ್ಯೂಡಿ ಅಕ್ರಮ ತನಿಖೆ ಬಗ್ಗೆ ನ್ಯಾಯಾಂಗ ತನಿಖೆ ಮಾಡುತ್ತಿಲ್ಲ. ನಮ್ಮ ಸರ್ಕಾರದ ಕಾರ್ಯವೈಖರಿ ಹಾಗೂ ಆದ್ಯತೆಗಳು ಇದರಿಂದ ಸ್ಪಷ್ಟವಾಗುತ್ತದೆ ಎಂದು ಖರ್ಗೆ ಟೀಕಿಸಿದರು.
ಇದನ್ನೂ ಓದಿ : ಖರ್ಗೆಗೆ ಒಳ್ಳೆಯದಾಗಲಿ ಅಂತ ಫೋನ್ನಲ್ಲಿ ಹಾರೈಸಿದ ಸಿದ್ದರಾಮಯ್ಯ.. ಕಾರಣ?!