ಬೆಂಗಳೂರು: ನನ್ನ ವಿರುದ್ಧ ವೈಯಕ್ತಿಕ ನಿಂದನೆ ಮಾಡಿರುವ ಹಿನ್ನೆಲೆಯಲ್ಲಿ ಮಾಜಿ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಅವರಿಗೆ ಲೀಗಲ್ ನೋಟಿಸ್ ನೀಡಲಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿಯವರಿಗೆ ಸರಳ ಪ್ರಶ್ನೆಗಳಿಗೆ ಉತ್ತರ ನೀಡಲು ಬರುವುದಿಲ್ಲ. ಅವರು ನನ್ನ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಮತ್ತು ವೈಯಕ್ತಿಕ ನಿಂದನೆಗಳನ್ನು ಮಾಡಿದ್ದರು. ಅದಕ್ಕಾಗಿ ಲೀಗಲ್ ನೋಟಿಸ್ ನೀಡಿದ್ದೇನೆ. ಈ ಕುರಿತು ಚರ್ಚಿಸಲು ಯಾವುದೇ ವೇದಿಕೆಯಾದರೂ ನಾವು ಸಿದ್ಧವಾಗಿದ್ದೇವೆ. ಆದರೆ ಸುಳ್ಳು ಚರ್ಚೆಗಳನ್ನು ನಿಲ್ಲಿಸಬೇಕು. ಲೀಗಲ್ ನೋಟಿಸ್ಗೆ ಏನು ಉತ್ತರ ಕೊಡ್ತಾರೆ ಎಂದು ನೋಡೋಣ' ಎಂದರು.
ಬಿಟ್‌ಕಾಯಿನ್ ನಿಷೇಧಿಸುವ ವಿಚಾರವಾಗಿ ಮಾತನಾಡಿ, 'ಕರಡು ಮಸೂದೆ ಬಗ್ಗೆ ಅಲ್ಪಸ್ವಲ್ಪ ಮಾಹಿತಿಯಿದೆ. ಪ್ರೈವೇಟ್ ಕ್ರಿಪ್ಟೋ ಕರೆನ್ಸಿ ನಿಷೇಧಿಸಿ ಪಬ್ಲಿಕ್ ಕ್ರಿಪ್ಟೋ ಕರೆನ್ಸಿ ತರಬೇಕು ಎಂದಿದೆ. ಸಂಪೂರ್ಣ ಡ್ರಾಫ್ಟ್ ನಾನು ಓದಿಲ್ಲ. ಜನರಲ್ಲಿ ಲೀಗಲ್ ಟೆಂಡರ್ ಬಗ್ಗೆ ಸ್ವಲ್ಪ ಗೊಂದಲವಿದೆ' ಎಂದು ಹೇಳಿದರು.
ಇದೇ ವೇಳೆ ಹಂಸಲೇಖ ಅವರ ಹೇಳಿಕೆ ವಿವಾದ ಕುರಿತು ಮಾತನಾಡಿ, 'ದಲಿತರ ಮನೆಗೆ ಹೋಗುವ ವಿಚಾರದಲ್ಲಿ ಹಂಸಲೇಖ ಅವರು ಹೇಳಿದ್ದರಲ್ಲಿ ತಪ್ಪೇನಿದೆ?. ಅವರೇನು ತಪ್ಪು ಹೇಳಿದ್ದಾರೆ?. ಬಿಜೆಪಿಯವರು ದಲಿತರ ಮನೆಗೆ ಹೋಗಿ ದಲಿತರು ಮಾಡಿದ ಆಹಾರ ತಿನ್ನುತ್ತಾರಾ?, ದಲಿತರ ಮನೆಗೆ ಹೋಗಿ ಹೋಟೆಲ್ನಿಂದ ತಿಂಡಿ ತರಿಸಿಕೊಳ್ಳುತ್ತಾರೆ. ಸುಮ್ಮನೆ ಏಕೆ ದಲಿತರ ಮನೆಗೆ ಹೋಗಿ ಹೀಗೆಲ್ಲಾ ಮಾಡಬೇಕು?. ಬಿಜೆಪಿಯಲ್ಲಿ ಮನುವಾದಿಗಳಿದ್ದಾರೆ' ಎಂದು ದೂರಿದರು.
ಇದನ್ನೂ ಓದಿ: ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ವಿಚಾರ: ವಿಚಾರಣೆ ವೇಳೆ ಕಣ್ಣೀರಿಟ್ಟ ಹಂಸಲೇಖ