ಬೆಂಗಳೂರು : ಹೆಚ್ಚುತ್ತಿರುವ ಭಾರತದ ಅಗತ್ಯತೆಗಳು, ಬೇಡಿಕೆಗಳನ್ನು ಸರ್ಕಾರಗಳಿಂದ ಮಾತ್ರ ಈಡೇರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಖಾಸಗಿ ಪಾಲುದಾರರ ಪಾತ್ರವೂ ಅನಿವಾರ್ಯವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಮತ್ತು ಕಾಮರ್ಸ್ನ ಪ್ರತಿನಿಧಿಗಳೊಂದಿಗಿನ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್ ಎಲ್ಲಾ ಕ್ಷೇತ್ರಗಳಲ್ಲಿ ದಿಕ್ಕನ್ನು ಬದಲಿಸುವ ಗುರಿ ಹೊಂದಿದೆ. ಭಾರತದಲ್ಲಿ ವೃದ್ಧಿಸುತ್ತಿರುವ ಮಹಾತ್ವಾಕಾಂಕ್ಷೆಗಳನ್ನು ಈಡೇರಿಸುವುದು ಸರ್ಕಾರಗಳಿಗೆ ಮಾತ್ರ ಸಾಧ್ಯವಿಲ್ಲ.
ಅದರ ಈಡೇರಿಕೆಗೆ ಖಾಸಗಿ ಸಹಭಾಗಿತ್ವದ ಅಗತ್ಯತೆ ಕೂಡ ಇದೆ. ಖಾಸಗಿ ಸಹಭಾಗಿತ್ವ ಉತ್ತೇಜಿಸದೇ ಇದ್ದರೆ ಭಾರತ ಒಂದು ದೊಡ್ಡ ಅವಕಾಶವನ್ನು ಕಳೆದುಕೊಳ್ಳಲಿದೆ. ಖಾಸಗಿ ಕ್ಷೇತ್ರಗಳು ಭಾರತದ ಅಭಿವೃದ್ಧಿಯ ದಿಶೆ ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಆ ಸಂದೇಶವನ್ನು ಈ ಸಾಲಿನ ಬಜೆಟ್ ನೀಡಿದೆ ಎಂದು ವಿವರಿಸಿದರು.
ಭಾರತ ಈಗ ನೂರಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಲಸಿಕೆ ಕಳುಹಿಸಿ ಕೊಡುತ್ತಿದೆ. ಭಾರತ ಏನು ಮಾಡಬಹುದು ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ. ಇದು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಿಂದ ಸಾಧ್ಯವಾಯಿತು. ಈ ಕೇಂದ್ರ ಬಜೆಟ್ ದಶಕಗಳ ಕಾಲ ಅಭಿವೃದ್ಧಿ ದಾರಿ ತೋರಿಸಿ ಕೊಡಲಿದೆ.
ಮುಂದಿನ ದಿನಗಳಲ್ಲಿ ಆರ್ಥಿಕ ಚೇತರಿಕೆಗೆ ಹಿನ್ನೆಡೆಯಾಗದಂತೆ ವಿತ್ತೀಯ ಕೊರತೆಯನ್ನು ಸರಿ ದಾರಿಗೆ ತರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಅಭಿವೃದ್ಧಿ ಸುಸ್ಥಿರ ಹಾಗೂ ಅಡಚಣೆರಹಿತವಾಗಿರುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಶಾಲಾ ಮಕ್ಕಳಿಗೆ ಟ್ಯಾಬ್ ನೀಡಿ : ಇದಕ್ಕೂ ಮುನ್ನ ಮಾತನಾಡಿದ ಮೋಹನದಾಸ್ ಪೈ, ಡಿಜಿಟಲ್ ಶಿಕ್ಷಣದಿಂದ ವಂಚಿತರಾಗಿರುವ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು. ಕೋವಿಡ್ ಬಳಿಕ ಸಮಾರು 60% ವಿದ್ಯಾರ್ಥಿಗಳು ಡಿಜಿಟಲ್ ಕ್ರಾಂತಿಯಿಂದ ವಂಚಿತರಾಗಿದ್ದಾರೆ.
ಅದರಲ್ಲೂ ಸರ್ಕಾರಿ ಶಾಲೆಗಳ ಮಕ್ಕಳು ಆನ್‌ಲೈನ್ ತರಗತಿ, ಡಿಜಿಟಲ್ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಡಿಜಿಟಲ್ ಶಿಕ್ಷಣದಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಹೊರಗಿಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಕೇಂದ್ರ ಬಜೆಟ್ನಲ್ಲಿ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸ್ಟಾರ್ಟ್‌ಅಪ್ ಭಾರತವನ್ನು ಪರಿವರ್ತಿಸಲು ಸಾಧ್ಯ. ಹೀಗಾಗಿ, ಸ್ಟಾರ್ಟ್ಅಪ್ಗಳಿಗೆ ಸರ್ಕಾರ ಇನ್ನೂ ಹೆಚ್ಚಿನ ಒತ್ತು ಕೊಡಬೇಕು. ಸದ್ಯ ಇರುವ 70 ಬಿಲಿಯನ್ ಡಾಲರ್ ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ಭಾರತದ ಹೂಡಿಕೆಯ ಸ್ಟಾರ್ಟ್‌ಅಪ್ ಗಳಿರುವುದು ಕೇವಲ 10%. ಉಳಿದಿರೋದೆಲ್ಲ ಬಂಡವಾಳ, ಡೋಮೈನ್ಗಳು ಭಾರತದಿಂದ ಹೊರಗಿವೆ.
ಅದು ಆಗಬಾರದು ನಾವು ಭಾರತವನ್ನು ಡಿಜಿಟಲ್ ಕಾಲೋನಿಯಾಗಿಸಲು ಸಿದ್ಧರಿಲ್ಲ. ಸ್ಟಾರ್ಟ್‌ಅಪ್ ಸಂಸ್ಥೆಗಳೆಲ್ಲವೂ ಭಾರತದಲ್ಲೇ ನೆಲೆಯೂರಬೇಕು, ಇಲ್ಲಿದ್ದೇ ಕಾರ್ಯ ನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಈ ಸುದ್ದಿಯನ್ನೂ ಓದಿ: ಉಳ್ಳಾಲ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿಳಿದ ಯೂಸುಫ್ ಪಠಾಣ್
ಇದೇ ವೇಳೆ ಮಾತನಾಡಿದ ಡಾ. ದೇವಿ ಶೆಟ್ಟಿ, ಆರೋಗ್ಯ ಕ್ಷೇತ್ರ ಭಾರತವನ್ನು ಪರಿವರ್ತಿಸುವ ಶಕ್ತಿ ಹೊಂದಿದೆ. ಭಾರತದ ಆರ್ಥಿಕತೆಗೆ ಅತಿ ದೊಡ್ಡ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ನೀತಿ ರೂಪಿಸುವ ಅಗತ್ಯತೆ ಇದೆ ಎಂದು ಸಲಹೆ ನೀಡಿದರು.
ಮುಂದಿನ ಐದು ವರ್ಷಗಳಲ್ಲಿ ಪರಿಣಿತ, ನುರಿತ ವೈದ್ಯರು, ಆರೋಗ್ಯ ಸಿಬ್ಬಂದಿಯಿಂದ ಸುಮಾರು 100 ಬಿಲಿಯನ್ ಡಾಲರ್ ಹಣ ಆಕರ್ಷಿಸುವ ನಿಟ್ಟಿನಲ್ಲಿ ನೀತಿ ರೂಪಿಸಬೇಕು. ವಿದೇಶಗಳಲ್ಲಿ ಆರೋಗ್ಯ ಸಿಬ್ಬಂದಿಯ ದೊಡ್ಡ ಕೊರತೆ ಎದುರಾಗಿದೆ.
ಭಾರತದ ವೈದ್ಯರು, ಆರೋಗ್ಯ ಸಿಬ್ಬಂದಿ ಜಾಗತಿಕ ಜನಮನ್ನಣೆ ಗಳಿಸಿದ್ದಾರೆ. ನಮ್ಮಲ್ಲಿನ ನುರಿತ ವೈದ್ಯರು, ನರ್ಸ್ಗಳ ಸಂಪನ್ಮೂಲವನ್ನು ವಿದೇಶಕ್ಕೆ ಕಳುಹಿಸದರೆ ಸುಮಾರು 100 ಬಿಲಿಯನ್ ಡಾಲರ್ ಭಾರತದ ಅರ್ಥಿಕತೆಗೆ ಕೊಡುಗೆ ನೀಡಿದೆ ಎಂದು ವಿವರಿಸಿದರು.