ಬೆಂಗಳೂರು: ಇಂದು ಮಧ್ಯರಾತ್ರಿಯಿಂದ ಖಾಸಗಿ ಪ್ರಯಾಣಿಕ ವಾಹನಗಳ ಮುಷ್ಕರ ನಡೆಯಲಿದೆ. ಬಹುತೇಕ ಆಟೋ, ಕ್ಯಾಬ್, ಬಸ್ ಸೇರಿದಂತೆ ಎಲ್ಲ ವಾಹನಗಳ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ. ಶಾಲಾ ಮಕ್ಕಳ ವಾಹನ ಕೂಡಾ ಸಂಚಾ ಸ್ಥಗಿತವಾಗಲಿದೆ ಎಂದು ಖಾಸಗಿ ಸಾರಿಗೆ ಚಾಲಕರು ಮತ್ತು ಮಾಲೀಕರು ಹೇಳುತ್ತಿದ್ದಾರೆ. ಆದರೆ ಖಾಸಗಿ ಶಾಲಾ ಒಕ್ಕೂಟಗಳು ಈವರೆಗೆ ಸ್ಪಷ್ಟವಾದ ನಿರ್ಧಾರ ಕೈಗೊಳ್ಳದಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರ ಗೊಂದಲಕ್ಕೆ ಕಾರಣವಾಗಿದೆ.
ಕೆಲವು ಖಾಸಗಿ ಶಾಲೆಗಳು ತಮ್ಮದೇ ವಾಹನ ವ್ಯವಸ್ಥೆಯನ್ನು ಹೊಂದಿವೆ. ಆದರೆ ಬಹುತೇಕ ನಗರದ ಶಾಲೆಗಳ ಬಳಿ ತಮ್ಮದೇ ಆದ ವಾಹನ ಇಲ್ಲ. ಆದ್ದರಿಂದ ಸೋಮವಾರ ರಜೆ ನೀಡಿ ವಾರಾಂತ್ಯದಲ್ಲಿ ವಿಶೇಷ ತರಗತಿಗಳನ್ನು ತೆಗೆದುಕೊಂಡು ಬಾಕಿ ಉಳಿದ ಪಾಠಗಳನ್ನು ಮುಗಿಸಬಹುದು ಎನ್ನುವ ನಿರ್ಧಾರಕ್ಕೆ ಬಂದಿವೆ. ಈ ಕಾರಣದಿಂದ ಕೆಲ ಶಾಲೆಗಳು ರಜೆ ಘೋಷಣೆ ಮಾಡಿ ಈಗಾಗಲೇ ಸಂದೇಶ ರವಾನಿಸಿವೆ.
ಈ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ ಬಹುತೇಕ ಶಾಲೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ತಲುಪಿಸಲು ಹಾಗೂ ವಾಪಸ್ ಕರೆದೊಯ್ಯಲು ತಮ್ಮದೇ ಆದ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಸಿಬಿಎಸ್‌ಸಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಎಂ ಶ್ರೀನಿವಾಸನ್ ಪ್ರತಿಕ್ರಿಯಿಸಿ ನಮ್ಮ ಎಲ್ಲಾ ಶಾಲೆಗಳೂ ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಹಲವು ಶಾಲೆಗಳಲ್ಲಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ರಜೆ ಘೋಷಣೆ ಕಷ್ಟ ಸಾಧ್ಯ ಎಂದಿದ್ದಾರೆ.
ಸೋಮವಾರ ಖಾಸಗಿ ಸಾರಿಗೆ ಬಂದ್: ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಕರ್ನಾಟಕ ಸರ್ಕಾರದ ಶಕ್ತಿ ಯೋಜನೆ ಕುರಿತು ಅಸಮಾಧಾನ ಭಾನುವಾರ ಮಧ್ಯರಾತ್ರಿಯಿಂದ ಬೆಂಗಳೂರಲ್ಲಿ ಸಾರಿಗೆ ಬಂದ್‌ಗೆ ಕರೆ ನೀಡಿವೆ. ಖಾಸಗಿ ವಾಹನಗಳ ಸೇವೆ ಸ್ಥಗಿತವಾಗುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ. ಸರ್ಕಾರದ ಶಕ್ತಿ ಯೋಜನೆಯಿಂದಾಗಿ ನಷ್ಟಕ್ಕೆ ಸಿಲುಕಿರುವ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ಚಾಲಕರಿಗೆ ಮಾಸಿಕ 10 ಸಾವಿರ ರೂ. ಪರಿಹಾರ ಧನ ನೀಡುವುದು ಸರ್ಕಾರವು ಬೈಕ್ ಟ್ಯಾಕ್ಸಿಗಳಿಗೆ ಕಡಿವಾಣ ಹಾಕಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದೆ.
ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್ ಹಿನ್ನೆಲೆ ನಗರದಲ್ಲಿ ಸುಮಾರು 4 ಲಕ್ಷ ಆಟೋ, 2 ಲಕ್ಷ ಟ್ಯಾಕ್ಸಿ, 30 ಸಾವಿರ ಗೂಡ್ಸ್ ವಾಹನಗಳು, 8 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 90 ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೊರೇಟ್ ಕಂಪನಿ ಬಸ್‌ಗಳು ಬಂದ್ ಆಗುವ ಸಾಧ್ಯತೆಯಿದೆ. ನಾಳಿನ ಸಾರಿಗೆ ಬಂದ್‌ಗೆ 32 ಸಂಘಟನೆಗಳು ಬೆಂಬಲ ನೀಡಿವೆ. ಇದರಿಂದ ಬೆಂಗಳೂರು ವ್ಯಾಪ್ತಿಯ ಶಾಲಾ-ಕಾಲೇಜು ವಿದ್ಯಾರ್ಥಿಗಳ ವಾಹನ ಸೌಲಭ್ಯ ಬಂದ್ ಆಗುವ ಸಾದ್ಯತೆ ದಟ್ಟವಾಗಿದ್ದು, ಶಾಲಾ ಮಕ್ಕಳಿಗೂ ಬಿಸಿ ತಟ್ಟಲಿದೆ.
ಹೆಚ್ಚುವರಿ ಬಿಎಂಟಿಸಿ: ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಬಂದ್ ಕರೆ ಹಿನ್ನೆಲೆಯಲ್ಲಿ ಬಿಎಂಟಿಸಿ 500 ಹೆಚ್ಚುವರಿ ಬಸ್ ಓಡಿಸಲು ತೀರ್ಮಾನಿಸಿದೆ. ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಅಧಿಕಾರವನ್ನು ಜಿಲ್ಲಾಕಾಧಿಕಾರಿಗೆ ನೀಡಲಾಗಿದೆ. ಈವರೆಗೆ ಕೆಲವು ಶಾಲಾ ಕಾಲೇಜುಗಳು ಮಾತ್ರ ರಜೆ ಘೋಷಣೆ ಮಾಡಿವೆ.
ಬಿಜೆಪಿಯಿಂದ ನೈತಿಕ ಬೆಂಬಲ: ರಾಜ್ಯದಲ್ಲಿ ಸೋಮವಾರ ನಡೆಯುವ ಖಾಸಗಿ ವಾಹನ ಮಾಲೀಕರ ಹಾಗೂ ಚಾಲಕರ ಮುಷ್ಕರಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ. ಬಸ್ ಮಾಲೀಕರು, ಆಟೋ, ಕ್ಯಾಬ್ ಮಾಲೀಕರು ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರಕ್ಕೆ ಮುಂದಾಗಿದ್ದಾರೆ. ಅವರಿಗೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಕಟೀಲ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ನಾಳೆ ಬೆಂಗಳೂರು ಬಂದ್.. ಇಂದು ಮಧ್ಯರಾತ್ರಿಯಿಂದ BMTC ಹೆಚ್ಚುವರಿ ಬಸ್ ಸೇವೆ