ಬೆಂಗಳೂರು: ಕೋವಿಡ್ ಫೀವರ್ ಒಂದು ಕಡೆ, ಲಾಕ್ಡೌನ್ ಮತ್ತೊಂದು ಕಡೆ ಸಾಮಾನ್ಯ ಜನರ ಜೀವನದ ಮೇಲೆ ಮಾಡಿರುವ ಪರಿಣಾಮ ಅಷ್ಟಿಷ್ಟಲ್ಲ. ಇದರ ನಡುವೆ ಖಾಸಗಿ ಶಾಲೆಗಳಲ್ಲಿ ಬಲವಂತವಾಗಿ ಶುಲ್ಕ ವಸೂಲಿ ಮಾಡಬಾರದೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.
ಪ್ರತಿವರ್ಷ ಎಲ್ಲ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಮಾಡಲಾಗುತ್ತದೆ. ಈಗಾಗಲೇ ಇರುವ ಸಮಸ್ಯೆಗಳಿಂದ ಹೈರಾಣಾಗಿರುವ ಪೋಷಕರು, ಈಗ ಶುಲ್ಕ ಹೆಚ್ಚಳ ಮಾಡಿದರೆ ಮತ್ತಷ್ಟು ಆತಂಕಕ್ಕೆ ಒಳಗಾಗುತ್ತಾರೆ. ಇದೇ ಕಾರಣಕ್ಕೆ ಈ ಸಾಲಿನಲ್ಲಿ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ಶುಲ್ಕವನ್ನು ಹೆಚ್ಚಳ ಮಾಡದಿರಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಕಳೆದ ಸಾಲಿನಲ್ಲಿ ಪಡೆದ ಶುಲ್ಕಕ್ಕಿಂತ ಕಡಿಮೆ ಶುಲ್ಕವನ್ನು ಪಡೆಯಲಿಚ್ಛಿಸುವ ಶಾಲೆಗಳು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬಹುದೆಂದು ಸ್ಪಷ್ಟಪಡಿಸಿದ್ದಾರೆ. ಉಳಿದಂತೆ ಕಳೆದ ವರ್ಷದ ಶುಲ್ಕವನ್ನೇ ಈ ವರ್ಷ ಮುಂದುವರೆಸಬೇಕು. ಹೆಚ್ಚಳ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ.
ಈಗಾಗಲೇ ಉಳಿದ ಹಲವು ರಾಜ್ಯಗಳಾದ ಅಸ್ಸೋಂ, ದೆಹಲಿ, ಉತ್ತರ ಪ್ರದೇಶ, ತೆಲಂಗಾಣ ಶುಲ್ಕ ಜಾಸ್ತಿ ಮಾಡಬಾರದೆಂದು ಖಾಸಗಿ ಶಾಲೆಗಳಿಗೆ ಫರ್ಮಾನು ಹೊರಡಿಸಿವೆ. ಈಗ ಕರ್ನಾಟಕ ರಾಜ್ಯವೂ ಆದೇಶ ಹೊರಡಿಸಿದ್ದು, ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.
ಸಚಿವರ ಆದೇಶದ ನಡುವೆಯು ಶುಲ್ಕ ಪಾವತಿಸುವಂತೆ ಒತ್ತಾಯ :
ಇಂತಹ ಆರ್ಥಿಕ ಸಂಕಷ್ಟದ ನಡುವೆಯೂ ಪೋಷಕರ ಬಳಿ ಶಾಲಾ ಶುಲ್ಕವನ್ನ ಪಾವತಿಸುವಂತೆ ಬಲವಂತ ಮಾಡುವಂತಿಲ್ಲ ಎಂದು ಆದೇಶಿಸಲಾಗಿತ್ತು. ಇದರ ನಡುವೆಯೂ ಬೆಂಗಳೂರಿನ ಕೆಲ ಖಾಸಗಿ ಶಾಲೆಗಳು ಶುಲ್ಕಕ್ಕಾಗಿ ಪೋಷಕರನ್ನ ಪೀಡುಸುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.