ಬೆಂಗಳೂರು/ಭದ್ರಕ್: ಸಿಲಿಕಾನ್ ಸಿಟಿಯ ವೈಯಾಲಿಕಾವಲ್‌ನಲ್ಲಿ ನಡೆದ ಮಹಿಳೆ ಮಹಾಲಕ್ಷ್ಮಿ ಹತ್ಯೆ ಪ್ರಕರಣದ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ನಾಲ್ವರು ಸಿಬ್ಬಂದಿಯ ಕರ್ನಾಟಕ ಪೊಲೀಸರ ತಂಡವು ಒಡಿಶಾದ ಭದ್ರಕ್ ಜಿಲ್ಲೆಯ ಧುಸುರಿ ಪೊಲೀಸ್ ಠಾಣೆಗೆ ತಲುಪಿ, ತನಿಖೆ ಕೈಗೊಂಡಿದೆ.
ಪ್ರಕರಣದ ಆರೋಪಿಯಾಗಿದ್ದ ಒಡಿಶಾ ಮೂಲದ ಮುಕ್ತಿರಂಜನ್ ಪ್ರತಾಪ್ ರಾಯ್ ಬುಧವಾರ ಒಡಿಶಾದ ಭದ್ರಕ್ ಜಿಲ್ಲೆಯ ಭೂನಿಪುರದಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿತ್ತು. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಆರೋಪಿ ಆತ್ಮಹತ್ಯೆಗೆ ಮಾಡಿಕೊಂಡಿದ್ದು, ಆತನ ಸಹೋದರ ಹಾಗೂ ತಾಯಿ ಕೊಲೆಗೀಡಾದ ಮಹಾಲಕ್ಷ್ಮಿ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ.
ಆರೋಪಿ ಮುಕ್ತಿರಂಜನ್ ಸಹೋದರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ''ಮಹಾಲಕ್ಷ್ಮಿ ನನ್ನ ಸಹೋದರನಿಗೆ ಸಾಕಷ್ಟು ಚಿತ್ರಹಿಂಸೆ ಕೊಟ್ಟಿದ್ದಾಳೆ. ಮಹಾಲಕ್ಷ್ಮಿ ತನ್ನಿಂದ ಬಹಳಷ್ಟು ಹಣ ಪಡೆದಿದ್ದಳು ಎಂದು ನನ್ನ ಸಹೋದರ ಹೇಳಿಕೊಂಡಿದ್ದ. ಅಲ್ಲದೇ, ಚಿನ್ನದ ಉಂಗುರ ಮತ್ತು ನೆಕ್ಲೇಸ್ ಕೂಡ ತನ್ನಿಂದ ತೆಗೆದುಕೊಂಡಿದ್ದಳು ಎಂದಿದ್ದ. ಒಂದು ವೇಳೆ ತಾನು ಸಿಕ್ಕಿಬಿದ್ದರೆ, ನೀನು ಅಲ್ಲಿಗೆ ಹೋಗಬೇಡ. ಅವಳ ಸಹೋದರನೊಬ್ಬ ಗ್ಯಾಂಗ್‌ಸ್ಟರ್ ಆಗಿದ್ದು, ನಿನ್ನನ್ನು ಕೊಲ್ಲುತ್ತಾನೆ. ಮಹಾಲಕ್ಷ್ಮಿ ಯಾವಾಗಲೂ ತನಗೆ ಬ್ಲಾಕ್ಮೇಲ್ ಮಾಡುತ್ತಿದ್ದಳು. ತಾನು ಕೆಲಸದ ವಿಚಾರವಾಗಿ ತುಂಬಾ ಒತ್ತಡದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದ'' ಎಂದು ಆರೋಪ ಮಾಡಿದ್ದಾರೆ.
''ಮಹಾಲಕ್ಷ್ಮಿಯು ನನ್ನ ಮಗನಿಂದ ಹಣ, ಚಿನ್ನಾಭರಣ, ನೆಕ್ಲೇಸ್ ತೆಗೆದುಕೊಂಡಿದ್ದಳು. ತನ್ನೆಲ್ಲಾ ಹಣವನ್ನು ಮಹಾಲಕ್ಷ್ಮಿ ಪಡೆದುಕೊಂಡಿದ್ದಾಳೆ ಎಂದು ನನ್ನ ಮಗ ಹೇಳಿದ್ದ'' ಎಂದು ಆರೋಪಿಯ ತಾಯಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಪೊಲೀಸರಿಗೆ ಸಿಗುವ ಮುನ್ನವೆ ಆರೋಪಿಯ ಆತ್ಮಹತ್ಯೆ: ಸವಾಲಾದ ಮಹಾಲಕ್ಷ್ಮಿ ಹತ್ಯೆ ಪ್ರಕರಣ - Mahalakshmi murder case