ಬೆಂಗಳೂರು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಅಧಿಕೃತ ಇನ್‌ಸ್ಟಾಗ್ರಾಮ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಅವಮಾನಕರ ಹಾಗೂ ಪ್ರಚೋದನಕಾರಿ ಹೇಳಿಕೆ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ಕಲಬುರಗಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಪ್ರಕರಣ ಸಂಬಂಧ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಾರವಾಳ ಗ್ರಾಮದ ಪ್ರವೀಣ್ ಕುಮಾರ್ ಪಾಟೀಲ್ ಕಲಬುರಗಿಯ ಸೈಬರ್ ಅಪರಾಧ ಠಾಣೆ (ಸೆನ್)ಯಲ್ಲಿ ದಾಖಲಿಸಿರುವ ದೂರು ಹಾಗೂ ಅದರ ಸಂಬಂಧ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳನ್ನು ರದ್ದುಪಡಿಸುವಂತೆ ಕೋರಿ ಜೆ.ಪಿ. ನಡ್ಡಾ ಹಾಗೂ ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆಗೆ ತಡೆ ನೀಡಿ ಆದೇಶಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದೂರಿನಲ್ಲಿ ಐಪಿಸಿ ಸೆಕ್ಷನ್ 152 (ಎ) ಅಡಿ ಆರೋಪಿಸಲಾಗಿದೆ. ಆದರೆ, ಅದಕ್ಕೆ ಪೂರಕ ಪುರಾವೆಗಳಿಲ್ಲ. ದೆಹಲಿಯಲ್ಲಿ ಟ್ವೀಟ್ ಮಾಡಿರುವುದಕ್ಕೂ ಕಲಬುರಗಿಗೂ ಏನು ಸಂಬಂಧ? ಅರ್ಜಿದಾರರ ವಿರುದ್ಧದ ಇಂತಹದ್ದೇ ಬೇರೊಂದು ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿದೆ. ಈ ಹಂತದಲ್ಲಿ ಈ ಪ್ರಕರಣಕ್ಕೆ ಸಂಪೂರ್ಣ ತಡೆ ನೀಡಬೇಕು ಎಂದು ಕೋರಿದ್ದರು.
ವಾದ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿತು. ಅಲ್ಲದೇ, ದೂರುದಾರ ಪ್ರವೀಣ್ ಕುಮಾರ್ ಪಾಟೀಲ್‌ಗೆ ನೋಟಿಸ್ ಜಾರಿಗೊಳಿಸಿತು. ಹೈಕೋರ್ಟ್ ಅನುಮತಿಯಿಲ್ಲದೆ ಚಾರ್ಜ್‌ಶೀಟ್ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬಾರದು ಎಂದು ಪ್ರಕರಣದ ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ ಏನು?: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕೃತ ಇಂಡಿಯಾ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಅಬ್ ಕಿ ಬಾರ್ 400 ಪಾರ್’ ಹ್ಯಾಷ್‌ಟ್ಯಾಗ್‌ನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಹಿಂದೂಗಳ ಆಸ್ತಿಯನ್ನು ಕಸಿದು ಮುಸ್ಲಿಮರಿಗೆ ಹಂಚಲಾಗುತ್ತದೆ. ದೇಶದ ಸಂಪತ್ತನ್ನು ಲೂಟಿ ಮಾಡಿರುವ ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ ಪೋಷಿಸುತ್ತಿದೆ ಎಂದು ವಿಡಿಯೋಗಳನ್ನು ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೆ.ಪಿ. ನಡ್ಡಾ, ಅಮಿತ್ ಮಾಳವಿಯಾ ವಿರುದ್ಧ ದೂರು ನೀಡಲಾಗಿತ್ತು. ದೂರಿಗೆ ಸಂಬಂಧಿಸಿದಂತೆ ಐಪಿಸಿ ವಿವಿಧ ಸೆಕ್ಷನ್‌ಗಳು ಮತ್ತು ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.