ಬೆಂಗಳೂರು: ಯಾವುದೇ ಏಜೆನ್ಸಿ, ಎನ್ಜಿಒ, ಖಾಸಗಿ ಸಂಸ್ಥೆಗಳು ಮನೆ ಮನೆ ತೆರಳಿ ಮತದಾರರ ಮಾಹಿತಿ ಕಲೆ ಹಾಕುವಂತಿಲ್ಲ ಎಂದು ಚುನಾವಣಾ ಆಯೋಗ ಸೂಚನೆ ನೀಡಿದೆ. ಈ ಕುರಿತು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಪ್ರಕಟಣೆ ಹೊರಡಿಸಿದ್ದಾರೆ.
ಕೆಲ ಜಿಲ್ಲೆಗಳಲ್ಲಿ ಖಾಸಗಿ ಏಜೆನ್ಸಿಗಳು ಸಾರ್ವಜನಿಕರ ಮನೆಗೆ ತೆರಳಿ ಮತದಾರರ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ಹಿನ್ನೆಲೆ ಖಾಸಗಿ ಸಂಸ್ಥೆಗಳು, ಏಜೆನ್ಸಿಗಳು ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಕಲೆ ಹಾಕಲು ನಿರ್ಬಂಧಿಸಿ ಭಾರತೀಯ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಈ ಸಂಬಂಧ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು ಖಾಸಗಿ ಏಜೆನ್ಸಿಗಳು ಐಡಿ ಕಾರ್ಡ್ ದುರುಪಯೋಗ ಮಾಡಿ ಸಂಭಾವ್ಯ ಮತದಾರರ ಮಾಹಿತಿ ಸಂಗ್ರಹ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
(ಓದಿ: ಮತ ಪರಿಷ್ಕರಣೆ ಅಕ್ರಮ: ಇಬ್ಬರು ಅಧಿಕಾರಿಗಳ ಅಮಾನತಿಗೆ ಚುನಾವಣೆ ಆಯೋಗದಿಂದ ಖಡಕ್ ನಿರ್ದೇಶನ)