ಬೆಂಗಳೂರು: ಪ್ರಿಂಟಿಂಗ್ ಪ್ರೆಸ್ ಮಾಲೀಕರೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಬಂಧನ ಭೀತಿಯಿಂದ ಥೈರಾಯಿಡ್ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಚಂದ್ರಾಲೇಔಟ್ 1ನೇ ಹಂತದ ನಿವಾಸಿ ಲಿಯಾಕತ್ ಆಲಿಖಾನ್ ಎಂಬ ವ್ಯಕ್ತಿ ಹತ್ಯೆಯಾಗಿದ್ದನು. ಕೊಲೆಗೀಡಾದ ವ್ಯಕ್ತಿಗೆ ಪರಿಚಯಸ್ಥರಾಗಿದ್ದ ಇಲಿಯಾಜ್ ಹಾಗೂ ಕೆಲ ವ್ಯಕ್ತಿಗಳ ವಿರುದ್ಧ ಕುಟುಂಬಸ್ಥರು ದೂರು ದಾಖಲಿಸಿದ್ದರು. ಕೊಲೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡ ಪೊಲೀಸರು ಈತನನ್ನ ಪ್ರಶ್ನಿಸಲು ಮನೆಗೆ ಹೋಗಿದ್ದ ವೇಳೆ ಆತ ಥೈರಾಯಿಡ್ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನಿಸಿರುವುದು ಗೊತ್ತಾಗಿದೆ.
ಮುಂಜಾಗ್ರತೆ ಕ್ರಮವಾಗಿ ಆಸ್ಪತ್ರೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಆರೋಪಿ ಕಾವಲಿಗಾಗಿ ನಿಯೋಜಿಸಲಾಗಿದೆ. ಡಿಸ್ಚಾರ್ಜ್ ಆದ ಆದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಹಾಗೂ ಇಬ್ಬರ ಮಕ್ಕಳೊಂದಿಗೆ ವಾಸವಾಗಿದ್ದ ಲಿಯಾಕತ್ ಖಾನ್, ಹಲವು ವರ್ಷಗಳಿಂದ ಗಂಗೊಂಡನಹಳ್ಳಿಯ ರಾಯಲ್ ಕಮ್ಯೂನಿಕೇಷನ್ ಎಂಬ ಹೆಸರಿನ ಪ್ರಿಂಟಿಂಗ್ ಪ್ರೆಸ್ ಮಾಲೀಕನಾಗಿದ್ದರು. ಜೋಹರ್, ವಸೀಂ ಹಾಗೂ ಇಲಿಯಾಜ್ ಖಾನ್ ಅವರು ಲಿಯಾಕತ್ ಖಾನ್ನೊಂದಿಗೆ ಆರ್ಥಿಕ ಪಾಲುದಾರರಾಗಿದ್ದರು.
ಪ್ರಿಂಟಿಂಗ್ ಪ್ರೆಸ್ ಮಾಲೀಕ ಲಿಯಾಕತ್ ಅಲಿಖಾನ್ ಕೆಲಸ ಮುಗಿಸಿ ಪ್ರತಿದಿನ ನಾಗರಭಾವಿಯಲ್ಲಿರುವ ಜಿಮ್ ತೆರಳಿ ನಂತರ ಮನೆಗೆ ಹೋಗುತ್ತಿದ್ದರು. ನಿನ್ನೆ ಸಂಜೆ ಜಿಮ್ ತೆರಳಿದ ಲಿಯಾಕತ್ 11 ಗಂಟೆಯಾದರೂ ಮನೆಗೆ ತೆರಳಲಿರಲಿಲ್ಲ. ಆತಂಕಗೊಂಡ ಪುತ್ರ ಕುಟುಂಬಸ್ಥರು ನಾಯಂಡಹಳ್ಳಿ ಚೆಟ್ಟಿಸ್ ಪೆಟ್ರೋಲ್ ಬಂಕ್ ಹಿಂಭಾಗದ ಮನೆಗೆ ಹೋಗಿ ನೋಡಿದಾಗ ಬರ್ಬರವಾಗಿ ಹತ್ಯೆ ಮಾಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಕೆಲ ವ್ಯಕ್ತಿಗಳ ವಿರುದ್ಧ ಕುಟುಂಬಸ್ಥರು ದೂರು ದಾಖಲಿಸಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹಂತಕರ ಪತ್ತೆಗಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.
ಕುಲ್ಲಕ ಜಗಳ,ಯುವಕನ ಕೊಲೆ: ಈ ನಡುವೆ ಕಲಬುರಗಿಯಲ್ಲಿ ಇತ್ತೀಚೆಗೆ ಯುವಕರಿಬ್ಬರ ನಡುವಿನ ಜಗಳದಲ್ಲಿ ಒಬ್ಬ ಕೊಲೆಯಾದ ಘಟನೆ ನಡೆದಿತ್ತು. ಭರತ ವಾಡಿ (24) ಕೊಲೆಗೀಡಾದ ಯುವಕ. ಕಾಳಮಂದರ್ಗಿ ಗ್ರಾಮದ ಶಾಲೆಯ ಕಟ್ಟೆ ಮೇಲೆ ಮಲಗಿದ್ದ ಈತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರನಾಗಿ ಹತ್ಯೆ ಮಾಡಲಾಗಿತ್ತು. ಮಂಗಳವಾರ ಬೆಳಗ್ಗೆ ಘಟನೆ ನಡೆದಿದ್ದು, ಅದೇ ಗ್ರಾಮದ ಹಾಗೂ ಮೃತನ ಸಂಬಂಧಿ ಮಲ್ಲಿಕಾರ್ಜುನ ವಾಡಿ ಎಂಬುವನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಭರತ ಎಂಬಾತ ಮಲ್ಲಿಕಾರ್ಜುನನ ಮೊಬೈಲ್ ಸಿಮ್ ತೆಗೆದು ಕಲ್ಲಿಗೆ ಉಜ್ಜಿ ನಿಷ್ಕ್ರಿಯಗೊಳಿಸಿದ್ದನಂತೆ. ಈ ವಿಷಯವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಇಬ್ಬರೂ ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಗ್ರಾಮಸ್ಥರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ. ಭರತ ರಾತ್ರಿ ಊಟ ಮುಗಿಸಿ ಶಾಲೆಯ ಕಟ್ಟೆಗೆ ಬಂದು ಮಲಗಿದ್ದಾನೆ. ಹೀಗೆ ಮಲಗಿದಾತ ಬೆಳಗ್ಗೆ ಹತ್ಯೆಯಾಗಿದ್ದಾನೆ. ತಲೆಯ ಭಾಗದಲ್ಲಿ ಗಂಭೀರ ಗಾಯವಾಗಿದ್ದು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಪಕ್ಕದಲ್ಲೇ ಸೈಜುಗಲ್ಲು ಪತ್ತೆಯಾಗಿದೆ. ಭರತನ ತಾಯಿ ಬಂಗಾರಮ್ಮ ಕಮಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು ಆರೋಪಿಗೆ ಬಲೆ ಬೀಸಿದ್ದಾರೆ.
ಇದನ್ನೂಓದಿ:ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿ ಇಂಜಿನಿಯರ್ ವಿದ್ಯಾರ್ಥಿ ಸಾವು