ಬೆಂಗಳೂರು : ಪ್ರಧಾನಿ ಅವರ ಭಾಷಣದ ಮೇಲೆ ಬಹಳ ನಿರೀಕ್ಷೆ ಇತ್ತು. ಆದರೆ ಆ ಕುರಿತು ಈಗ ನಿರಾಸೆಯಾಗಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ತಿಳಿಸಿದರು.
ವಿಧಾನಸೌಧದ ಬಳಿ ಮಾತನಾಡಿದ ಅವರು, ಕೊರೊನಾ ವೈರಸ್ ನಿಂದ ಜನ ದೂರ ಇರಬೇಕು ಎಂದು ಪ್ರಧಾನಿ ಸೂಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಯಾವ ರೀತಿ ಐಸೋಲೇಟೆಡ್ ವಾರ್ಡ್ ವ್ಯವಸ್ಥೆ ಮಾಡಬಹುದು? ಕೇಂದ್ರದಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುತ್ತಾರಾ ಎಂದು ಕಾಯುತ್ತಿದ್ದೆವು. ಆದರೆ ಭಾಷಣ ಕೇಳಿದ ಮೇಲೆ ಬೇಸರವಾಗಿದೆ ಎಂದು ಹೇಳಿದರು.
ಎಲ್ಲಾ ಬಾಡಿಗೆದಾರರಿಗೆ ಶೇ.25 ಬಾಡಿಗೆ ಕಡಿಮೆ ಮಾಡಬೇಕು. ವೃದ್ದರು, ಮಹಿಳೆಯರಿಗೆ ವಾರ ಕಳೆಯಲು ಬೇಕಾದ ದಿನ ಬಳಕೆ ವಸ್ತು ಪೂರೈಕೆ ಮಾಡಬೇಕು. ಮಾರ್ಚ್ 22 ರ ನಂತರ ಅಂತಾರಾಷ್ಟ್ರೀಯ ವಿಮಾನ ಬಂದ್ ಮಾಡಿದ್ರೆ ಏನು ಪ್ರಯೋಜನ. ಅಷ್ಟರಲ್ಲಿ ಸೋಂಕಿತರು ಎಲ್ಲರು ಬಂದು ಬಿಡುತ್ತಾರೆ. ಕೂಲಿ ಕಾರ್ಮಿಕರು , ಕಷ್ಟದಲ್ಲಿರುವವರಿಗೆ ಸಹಾಯ ಆಗುವಂತೆ ಮಾಡಬೇಕು. ಜೊತೆಗೆ ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಇಲ್ಲೂ ಯೋಜನೆ ರೂಪಿಸಬೇಕು. ಜನ ಸಾಮಾನ್ಯರಿಗೆ ಅನುಕೂಲ ಆಗುವಂತೆ ನೋಡಿಕೊಳ್ಳಬೇಕು ಎಂದರು.