ಬೆಂಗಳೂರು: ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಜನವರಿ 19 ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮತ್ತೊಂದೆಡೆ, ರಾಜ್ಯ ರಾಜಧಾನಿಯಲ್ಲಿ ರೋಡ್ ಶೋ ಆಯೋಜಿಸುವ ಕುರಿತು ರಾಜ್ಯ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ.
ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ ( ಬಿಐಇಟಿಸಿ)ಗೆ ಜನವರಿ 19ರಂದು ಪ್ರಧಾನಿ ಮೋದಿ ಭೇಟಿ ನೀಡುವ ಸಾಧ್ಯತೆಗಳಿದ್ದು, ಈ ಸಂಬಂಧ ಪ್ರಧಾನಿ ಕಚೇರಿಯಿಂದ ಮಾಹಿತಿ ಲಭಿಸಿದೆ. ಹಾಗಾಗಿ ಇದೇ ಕಾರಣಕ್ಕೆ 19 ರಂದು ನಡೆಯಲಿದ್ದ ಪಕ್ಷದ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮೋದಿ ಭೇಟಿ ವೇಳೆ ರೋಡ್ ಶೋಗೂ ಚಿಂತನೆ ನಡೆದಿದೆ. ಈ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚಿಸಿ, ಪ್ರಧಾನಿ ಭೇಟಿ ಅಧಿಕೃತವಾದ ನಂತರ ಮುಂದಿನ ಹೆಜ್ಜೆ ಇಡುತ್ತೇವೆ. ಇದೇ ವೇಳೆ ವಿಶೇಷ ಕಾರ್ಯಕಾರಿಣಿ ಸಭೆ ದಿನಾಂಕ ಅಂತಿಮಗೊಳಿಸಲಾಗುವುದು ಎಂದು ಎಂದು ಬಿಜೆಪಿ ರಾಜ್ಯ ಪ್ರಧಾನಿ ಕಾರ್ಯದರ್ಶಿ ಪಿ ರಾಜೀವ್ ತಿಳಿಸಿದ್ದಾರೆ.
ಇನ್ನು ಮೋದಿ ಭೇಟಿ ಸಾಧ್ಯತೆ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಬೆಂಗಳೂರಿನ ಮೂರು ಸಂಘಟನಾತ್ಮಕ ಜಿಲ್ಲೆಗಳ ಪದಾಧಿಕಾರಿಗಳ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಭೆ ನಡೆಸಿದರು. ಮೋದಿ ಆಗಮಿಸಿದ ವೇಳೆ ಒಂದು ಕಿ.ಮೀ. ರೋಡ್ ಶೋ ನಡೆಸಬೇಕು ಆ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಬೇಕು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಬೆಂಗಳೂರಿನ ಪ್ರಮುಖ ನಾಯಕರಿಗೆ ವಿಜಯೇಂದ್ರ ಸೂಚನೆ ನೀಡಿದ್ದಾರೆ.
ಪ್ರಧಾನಿ ಕಚೇರಿ ಮೋದಿ ಅವರ ಕಾರ್ಯಕ್ರಮ ಪಟ್ಟಿಯಲ್ಲಿ ಬಿಜೆಪಿ ಕಾರ್ಯಕ್ರಮಕ್ಕೆ ಎಷ್ಟು ಸಮಯ ನೀಡಲಿದೆ, ರೋಡ್ ಶೋಗೆ ಅನುಮತಿ ನೀಡಲಿದೆಯಾ, ಎಲ್ಲಿ ರೋಡ್ ಶೋಗೆ ಅನುಮತಿ ಸಿಗಲಿದೆ ಎನ್ನುವುದರ ಆಧಾರದಲ್ಲಿ ರೋಡ್ ಶೋ ಆಯೋಜನೆಗೆ ನಿರ್ಧರಿಸಿದ್ದು, ಪ್ರಧಾನಿ ಕಚೇರಿಯ ಅನುಮತಿಯನ್ನು ಬಿಜೆಪಿ ನಾಯಕರು ಎದುರು ನೋಡುತ್ತಿದ್ದಾರೆ. ಈ ಹಿಂದೆ ವಿಧಾನಸಭಾ ಚುನಾವಣೆಗೂ ಮೊದಲು ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದರು. ಮೋದಿ ರೋಡ್ ಶೋಗೆ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡರೂ ಬೆಂಗಳೂರಿನಲ್ಲಿ ಸಿಂಹಪಾಲಿನ ಸ್ಥಾನ ಗೆದ್ದಿತ್ತು. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ರೋಡ್ ಶೋ ಮೂಲಕ ಮತ್ತೆ ಬೆಂಗಳೂರು ಮತದಾರರ ಸೆಳೆಯುವ ತಂತ್ರಕ್ಕೆ ಬಿಜೆಪಿ ಮುಂದಾಗಿದೆ.
ಇದನ್ನೂ ಓದಿ: 'ಪೂಜಿಸಲೆಂದೇ ಹೂಗಳ ತಂದೆ..' ಗೀತೆಗೆ ಪ್ರಧಾನಿ ಮೋದಿ ಮೆಚ್ಚುಗೆ; ಕೃತಜ್ಞತೆ ಸಲ್ಲಿಸಿದ ಗಾಯಕಿ