ಬೆಂಗಳೂರು : ಪಿಕ್ ಪಾಕೆಟರ್ಗಿಂತ ನಾಜೂಕಾಗಿ ಜೇಬು ಕತ್ತರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಜನರಿಗೆ ಬೆಲೆ ಏರಿಕೆಯ ಗ್ಯಾರಂಟಿ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ನಗರದ ಕೆ ಜಿ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಗಾಂಧಿನಗರ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ‘ಮೇರಾ ಬೂತ್- ಸಬ್‍ಸೇ ಮಜ್‍ಬೂತ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರವು ಸದ್ದಿಲ್ಲದೆ ವಿದ್ಯುತ್ ದರ ಏರಿಸಿದ್ದಾರೆ. ಅಬಕಾರಿ ಸುಂಕವನ್ನೂ ಏರಿಸಿದ್ದಾರೆ. ಅದರ ಬೆನ್ನಿಗೇ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಮುಂದೆ ಕೊಟ್ಟಂತೆ ತೋರಿಸಿದ್ದಾರೆ. ಇನ್ನೊಂದೆಡೆ ಪಿಕ್ ಪಾಕೆಟ್ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಇದ್ದಲ್ಲೆಲ್ಲ ಹಗರಣಗಳದ್ದೇ ಸದ್ದು. ಅವರೆಲ್ಲರೂ ಖಾಯಂ ಜೈಲಿನಲ್ಲಿ ಇರಬೇಕಾದ ಭಯದಿಂದ ಒಟ್ಟಾಗಲು ಯತ್ನಿಸುತ್ತಿದ್ದಾರೆ. ಭಾರತದ ಅಭಿವೃದ್ಧಿ, ಉದ್ಧರಿಸುವ ಅಜೆಂಡಾ ಅವರದ್ದಲ್ಲ. ಕುಟುಂಬ ಉಳಿಸಿಕೊಳ್ಳುವುದು, ಜೈಲಿಗೆ ಹೋಗುವುದನ್ನು ತಪ್ಪಿಸುವ ಉದ್ದೇಶವನ್ನು ಈ ವಿಪಕ್ಷಗಳು ಹೊಂದಿವೆ. ಕೇಂದ್ರದ ಬಿಜೆಪಿ ಸರ್ಕಾರ ಜನರ ಬದುಕನ್ನು ಬದಲಾಯಿಸಲು ಸಹಾಯ ಮಾಡುತ್ತಿದೆ ಎಂಬುದನ್ನು ತಿಳಿಸಬೇಕಿದೆ. ಒಂದು ಸುಂಕ ಹೆಚ್ಚಳ, ವಿದ್ಯುತ್ ದರ ಏರಿಕೆಯ ಪರಿಣಾಮವಾಗಿ ಆಹಾರವಸ್ತುಗಳ ದರ ಏರಿಕೆ ಆಗುತ್ತದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಎಷ್ಟಿದೆ? ಯಾಕೆ ಜಾಸ್ತಿ ಮಾಡಿದ್ದಾರೆ? ಎಂಬುದನ್ನು ತುಲನೆ ಮಾಡಿ ನೋಡಬೇಕು ಎಂದು ಹೇಳಿದರು.
ವಿದ್ಯುತ್ ದರ ಏರಿಕೆ ಕುರಿತು ಮಾತನಾಡಿದ ಅವರು, ವಿದ್ಯುತ್ ದರ ಏರಿಕೆ ಕುರಿತು ಕೈಗಾರಿಕೋದ್ಯಮಿಗಳು ಬೇಸರ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ. ಕೈಗಾರಿಕೆ ಮುಚ್ಚಬೇಕಾದ ಸ್ಥಿತಿ ಬರಬಹುದೆಂದು ತಿಳಿಸಿದ್ದಾರೆ. ಇದರ ಹಿಂದೆ ದೊಡ್ಡ ಅಪಾಯ ಇದೆ. ಇದನ್ನು ಪರಿಹರಿಸಲು ರಾಜ್ಯ ಸರ್ಕಾರ ಮುಂದಾಗಲಿ. ಕೈಗಾರಿಕೆಗಳು ಮುಚ್ಚಿದರೆ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ. ತೆರಿಗೆ ಸಂಗ್ರಹ ಕುಸಿಯುತ್ತದೆ. ಹೀಗಾದಾಗ ಉಚಿತ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಸಾಲ ಮಾಡಿ ಎಷ್ಟು ದಿನ ತುಪ್ಪ ತಿನ್ನಬಹುದು ಅಥವಾ ತಿನ್ನಿಸಬಹುದು ಎಂದು ಕೇಳಿದ ಅವರು, ಕೆಲವು ದಿನ ಕಳೆದ ಬಳಿಕ ತುಪ್ಪವೂ ಇಲ್ಲ. ಕೈಗೆ ಚಿಪ್ಪು ಅಷ್ಟೇ. ಸಿದ್ದರಾಮಯ್ಯರ ಅವಧಿಯಲ್ಲಿ ರೀಡೂ ಆಗಿತ್ತು. ರೀಡೂ ಮೂಲಕ ವಂಚನೆ ಮಾಡುವುದು ಹೇಗೆ ಎಂಬುದನ್ನು ಪರಿಚಯಿಸಿದ್ದೇ ಕಾಂಗ್ರೆಸ್ ಆಡಳಿತ. ಕಾಂಗ್ರೆಸ್ಸಿಗರು ಪ್ರಾಮಾಣಿಕರಿದ್ದರೆ ಮೊದಲು ಆ ಕುರಿತು ಕ್ರಮ ಕೈಗೊಳ್ಳಲಿ ಎಂದು ಸಿ ಟಿ ರವಿ ಆಗ್ರಹಿಸಿದರು.
ಭೋಪಾಲ್‍ನಲ್ಲಿ ದೇಶದ ಎಲ್ಲ ಲೋಕಸಭಾ ಕ್ಷೇತ್ರದ ವಿಸ್ತಾರಕರ ಜೊತೆ ಹಾಗೂ ದೇಶದ 10 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರ ಜೊತೆಗೆ ವರ್ಚುವಲ್ ಮಾಧ್ಯಮದಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರು ಮಾತನಾಡಿದ್ದಾರೆ. ಕಾರ್ಯಕರ್ತರ ಪ್ರಶ್ನೆಗಳು, ಅನುಮಾನಗಳಿಗೆ ಉತ್ತರವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : Tomato rate: ಗಗನಕ್ಕೇರಿದ ಟೊಮೆಟೊ ಬೆಲೆ.. ತರಕಾರಿ ಕೊಳ್ಳಲು ಹಿಂದೇಟು ಹಾಕುತ್ತಿರುವ ಗ್ರಾಹಕರು