ಬೆಂಗಳೂರು: ''ಕುಂಚಿಟಿಗ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುತ್ತದೆ'' ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ತುಳಸಿ ಮದ್ದಿನೇನೆ ಹಾಗೂ ನಿವೃತ್ತ ಕಾರ್ಯದರ್ಶಿ ತಿಪ್ಪೇಸ್ವಾಮಿ ಸಭೆಯಲ್ಲಿ ಭಾಗವಹಿಸಿದ್ದರು.
ಕುಂಚಿಟಿಗ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ರಾಜ್ಯ ಸಚಿವ ಸಂಪುಟ ಸಭೆ ಈಗಾಗಲೇ ನಿರ್ಧಾರ ಕೈಗೊಂಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗಿದ್ದು, ಕೇಂದ್ರ ಸರ್ಕಾರಕ್ಕೆ ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರದ ಮಾಹಿತಿ ರವಾನಿಸಬೇಕು. ಆದಷ್ಟು ಬೇಗ ಕೇಂದ್ರ ಸರ್ಕಾರ ಈ ವಿಷಯವನ್ನು ಸಚಿವ ಸಂಪುಟ ಸಭೆಯ ಮುಂದೆ ತಂದು ಕುಂಚಿಟಿಗ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಜಯಚಂದ್ರ ಸೂಚನೆ ನೀಡಿದರು. ತಾವೂ ಸಹ ದೆಹಲಿಗೆ ತೆರಳಿ ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಈ ವಿಷಯವನ್ನು ಸಂಪುಟ ಸಭೆಯ ಮುಂದೆ ತರಲು ಒತ್ತಡ ಹೇರುವುದಾಗಿ ಜಯಚಂದ್ರ ಹೇಳಿದರು.
ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬೆಂಗಳೂರಿನ ಕೃಷ್ಣಾದಲ್ಲಿ ಇತ್ತೀಚೆಗೆ ನಡೆದಿತ್ತು. ಈ ವೇಳೆ, ವಸತಿ ನಿಲಯಗಳ 5,48,000 ವಿದ್ಯಾರ್ಥಿಗಳಿಗೆ ಟೂತ್ ಪೇಸ್ಟ್, ಬ್ರಶ್, ಮೈಸೋಪು, ಕೊಬ್ಬರಿ ಎಣ್ಣೆ, ಬಟ್ಟೆ ಸೋಪು ಸೇರಿದಂತೆ 93 ರೂ.ಗಳ ಕಿಟ್ ಗಂಡು ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ 135 ರೂ.ಗಳ ವೆಚ್ಚದಲ್ಲಿ ಶುಚಿ ಸಂಭ್ರಮ ಕಿಟ್ ಕೊಡಲು ಟೆಂಡರ್ ಕರೆಯಲು ಸಭೆಯಲ್ಲಿ ಒಪ್ಪಿಗೆ ನೀಡಿದ್ದರು.
ಕಿಟ್ಗಳ ವಿತರಣೆಗೆ ವರ್ಷಕ್ಕೆ 90 ಕೋಟಿ ರೂಪಾಯಿ ವೆಚ್ಚವಾಗಲಿದೆ. ಕಿಟ್ನಲ್ಲಿನ ವಸ್ತುಗಳ ಗುಣಮಟ್ಟ ಹೆಚ್ಚಿಸಲು ಸೂಚನೆ ಕೊಡಲಾಗಿದೆ. 75 ಗ್ರಾಮ್ ಬದಲಿಗೆ 125 ಗ್ರಾಮ್ಗಳ ಸೋಪು ನೀಡುವಂತೆ ಮತ್ತು ಇದರಲ್ಲಿ ಕೇವಲ ಶೇ.5 ರಷ್ಟು ಮಾತ್ರ ಲಾಭ ಇಟ್ಟುಕೊಳ್ಳಬೇಕೆಂದು ಮೈಸೂರು ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು.