ಬೆಂಗಳೂರು: ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಶುರುವಾಗಿದ್ಯಾ ಕಸರತ್ತು? ಹೀಗೊಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಇಂದು ಮಧ್ಯಾಹ್ನ 1.30 ರೊಳಗೆ ವಿಶ್ವಾಸಮತ ಯಾಚಿಸುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ರಾಜ್ಯಪಾಲರು ನಿರ್ದೇಶನ ನೀಡಿದ್ದರು. ಆದರೆ, ಸಿಎಂ ರಾಜ್ಯಪಾಲರ ಆದೇಶ ಪಾಲಿಸಿಲ್ಲ. ಸದನದಲ್ಲಿ ವಿಶ್ವಾಸಮತ ಯಾಚನೆ ಮೇಲೆ ಚರ್ಚೆ ಮುಂದುವರಿದಿರುವುದರಿಂದ ರಾಜ್ಯಪಾಲರು ಮತ್ತೆ ಇಂದು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಇಂದಿನ ಕಲಾಪ ಮುಗಿಯುವ ಮುನ್ನ ಬಹುಮತ ಸಾಬೀತು ಪಡಿಸಬೇಕೆಂದು ಸೂಚನೆ ನೀಡಿದ್ದಾರೆ. ಇದರ ಹಿಂದಿರುವುದೂ ಈ ಕಸರತ್ತಿನ ಭಾಗವೇ? ಎಂಬ ಪ್ರಶ್ನೆ ಮೂಡಿದೆ.
ಮುಂದಿನ ನಡೆ ಏನು? :
ಸುಪ್ರೀಂಕೋರ್ಟ್ ಕೂಡಾ ಈ ವಿಷಯದಲ್ಲಿ ಮುಂದುವರಿಯಬಹುದು. ನ್ಯಾಯಮೂರ್ತಿಗಳು ಸಂವಿಧಾನದ ಜತೆ ತಮಗಿರುವ ಅಧಿಕಾರವನ್ನು ಬಳಸಿ ಕಠಿಣ ಹೆಜ್ಜೆಇಡಬಹುದು. ಸಂವಿಧಾನದಲ್ಲಿರುವ ಅಂಶಗಳ ಜತೆ ಆಯಾ ಕಾಲಘಟ್ಟದ ವಿದ್ಯಮಾನಗಳನ್ನು ಅವಲೋಕಿಸಿ, ತಮ್ಮ ಆನುವಂಶಿಕ ಅಧಿಕಾರವನ್ನು ನ್ಯಾಯಮೂರ್ತಿಗಳು ಬಳಸಬಹುದು. ವಿಶ್ವಾಸಮತ ಕೋರಿರುವವರೇ ಮುಖ್ಯಮಂತ್ರಿ. ಹೀಗಿರುವಾಗ ಆ ಪ್ರಕ್ರಿಯೆ ಮುಗಿಸಲು ವಿಳಂಬವೇಕೆ? ಎಂದು ಸುಪ್ರೀಂಕೋರ್ಟ್ ಕೇಳಬಹುದು. ನ್ಯಾಯಮೂರ್ತಿಗಳಿಗಿರುವ ಆನುವಂಶಿಕ ಅಧಿಕಾರದ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಡ ಬುತ್ತಿ ಎನ್ನಲಾಗ್ತಿದೆ.
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಒಂದು ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ತಮ್ಮ ಮಿತ್ರರ ಮಾತು ಕೇಳಿ ವಿದೇಶಾಂಗ ವ್ಯವಹಾರಗಳ ಉನ್ನತಾಧಿಕಾರಿಯೊಬ್ಬರನ್ನು ರಾಜೀವ್ ಗಾಂಧಿ ಸರ್ಕಾರ ಅಮಾನತುಗೊಳಿಸಿತ್ತು. ಈ ಬೆಳವಣಿಗೆಯ ಬಗ್ಗೆ ಆ ಅಧಿಕಾರಿ ಮಾರ್ಮಿಕವಾಗಿ ಉತ್ತರಿಸುತ್ತಾರೆ. ನ್ಯಾಯಮೂರ್ತಿಗಳಿಗೆ ಆನುವಂಶಿಕ ಅಧಿಕಾರವಿದೆ. ಪ್ರತಿಯೊಬ್ಬ ವ್ಯಕ್ತಿಗೂ ಆಸ್ತಿಯ ಒಡೆತನ ಆನುವಂಶಿಕವಾಗಿ ಬರುತ್ತದೆ. ಆದರೆ ಇವರಿಗೆ (ರಾಜೀವ್ ಗಾಂಧಿ) ತಾಯಿಯ ರೂಪ, ಬಣ್ಣ ಬಂದಿರಬಹುದು. ಅಧಿಕಾರವೂ ಸಿಕ್ಕಿರಬಹುದು. ಆದರೆ ಅನುಭವ ಆನುವಂಶಿಕವಾಗಿ ಬರಲಾರದು ಎಂಬುದು ಆ ಅಧಿಕಾರಿಯ ಉತ್ತರವಾಗಿತ್ತು. ಇದರಲ್ಲೇ ಅಡಗಿದೆ ನ್ಯಾಯಮೂರ್ತಿಗಳ ವಿಶೇಷ ಪವರ್. ನಾಳೆ ಅದು ಬಳಕೆಯಾದರೆ ಮೈತ್ರಿ ಸರ್ಕಾರಕ್ಕೆ ಕಷ್ಟ ಎದುರಾಗಲಿದೆ. ಹೀಗಾಗಿ ವಿಶ್ವಾಸಮತ ಕೋರಲೇಬೇಕಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಇಲ್ಲದಿದ್ದರೆ ಈ ಸರ್ಕಾರ ರಾಜ್ಯಾಂಗಕ್ಕೆ ಬದ್ಧವಾಗಿ ನಡೆಯುತ್ತಿಲ್ಲ. ಅದಕ್ಕೆ ಬಹುಮತವಿಲ್ಲ. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಇದು ಅಶಕ್ತ ಎಂಬ ಕಾರಣ ಮುಂದೆ ಬರಲಿದೆ. ವಿಧಾನಸಭೆಯನ್ನು ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಹೇರಿದರೆ, ಮುಂದೆ ಸೂಕ್ತ ಕಾಲದಲ್ಲಿ ಅದನ್ನು ತೆರವು ಮಾಡಬಹುದು. ಅತ್ಯಂತ ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡಬಹುದು. ಸಂವಿಧಾನದ 356 ನೇ ವಿಧಿಯನ್ನು ಇದು ಸೆಳೆಯಲಿದೆ. ಹಾಗೇನಾದರೂ ಆದರೆ ಸರ್ಕಾರಕ್ಕೆ ಗಂಡಾಂತರ ಎದುರಾಗಲಿದೆ ಎನ್ನುತ್ತವೆ ಉನ್ನತ ಮೂಲಗಳು.