ಬೆಂಗಳೂರು: ಕೋವಿಡ್ ಕಾರಣದಿಂದ ಕಳೆದ ವರ್ಷ ಚಿತ್ರಸಂತೆ ಆನ್‌ಲೈನ್‌ಗೆ ಸೀಮಿತವಾಗಿತ್ತು. ಇದೀಗ ಚಿತ್ರಸಂತೆಯನ್ನ ಚಿತ್ರಕಲಾ ಪರಿಷತ್ತು ಮಾರ್ಚ್ 27ರಂದು ಹಮ್ಮಿಕೊಂಡಿದೆ. 19ನೇ ಚಿತ್ರಸಂತೆಗೆ ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಕೆಲವೆಡೆ ಸಂಚಾರ ಮಾರ್ಗಗಳಲ್ಲಿ ಬದಲಾವಣೆಯನ್ನು ಸಂಚಾರ ವಿಭಾಗದ ಪೊಲೀಸರು ಮಾಡಿದ್ದಾರೆ. ಈ ಮೂಲಕ ಚಿತ್ರಸಂತೆಗೆ ಸಹಕಾರ ನೀಡಿದ್ದಾರೆ.
ಬದಲಿ ಮಾರ್ಗಗಳು: ಕುಮಾರಕೃಪಾ ರಸ್ತೆಯ ವಿಂಡ್ಸರ್ ಮ್ಯಾನರ್ ವೃತ್ತದಿಂದ ರೇಸ್ ವ್ಯೂ ಜಂಕ್ಷನ್ ರಸ್ತೆವರೆಗೂ ಎರಡೂ ಬದಿ ರಸ್ತೆಗಳು ಬಂದ್ ಆಗಿರಲಿವೆ. ಪರ್ಯಾಯವಾಗಿ ಟ್ರಿಲೈಟ್ ಜಂಕ್ಷನ್, ಬಸವೇಶ್ವರ ಸರ್ಕಲ್, ಹಳೇ ಹೈಗ್ರೌಂಡ್ಸ್ ಮ್ಯಾನರ್ ಸರ್ಕಲ್ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಟಿ.ಚೌಡಯ್ಯ ರಸ್ತೆ ಮಾರ್ಗದಿಂದ ಬರುವ ವಾಹನಗಳಿಗೆ ಹಳೇ ಹೈಗ್ರೌಂಡ್ ಜಂಕ್ಷನ್, ಎಲ್ ಆರ್ಡಿಇ ಹಾಗೂ ಬಸವೇಶ್ವರ ಸರ್ಕಲ್, ರೇಸ್ ಕೋರ್ಸ್ ಮೂಲಕ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಯುನಿಫಾರ್ಮ್ ಬಣ್ಣದ ದುಪ್ಪಟ್ಟಾ ಧರಿಸುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಅವಕಾಶ ನೀಡಿ: ಸಿದ್ದರಾಮಯ್ಯ
ಪಾರ್ಕಿಂಗ್ ವ್ಯವಸ್ಥೆ: ರೈಲ್ವೆ ಪ್ಯಾರಲಲ್ ರಸ್ತೆ ಹಾಗೂ ಕ್ರೆಸೆಂಟ್ ರಸ್ತೆಯ ಗುರುರಾಜ ಕಲ್ಯಾಣ ಮಂಟಪದಿಂದ ಜನಾರ್ಧನ ಹೋಟೆಲ್ವರೆಗೆ ಮತ್ತು ಟ್ರಿಲೈಟ್ ಜಂಕ್ಷನ್ ನಿಂದ ಮೌರ್ಯ ಜಂಕ್ಷನ್ವರೆಗೂ ಕಾರುಗಳ ಪಾರ್ಕಿಂಗ್ಗೆ ಅವಕಾಶ ನೀಡಲಾಗಿದೆ. ಕೆ.ಕೆ ರಸ್ತೆ ಜಂಕ್ಷನ್‌ನಿಂದ ಜ್ಯುಡಿಷಿಯಲ್ ಅಕಾಡೆಮಿ ಕ್ರಾಸ್ವರೆಗೂ ಹಾಗೂ ಬಿಡಿಎ ಆವರಣದಲ್ಲಿ ಬೈಕ್ಗಳ ನಿಲುಗಡೆಗೆ ಅವಕಾಶವಿರಲಿದೆ. ಚಿತ್ರಸಂತೆ ಹಿನ್ನೆಲೆ ಮಾರ್ಚ್ 27ರಂದು ಬೆಳಗ್ಗೆ 6ರಿಂದ ರಾತ್ರಿ 9ಗಂಟೆವರೆಗೂ ಕುಮಾರಕೃಪ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ. ಬಿ.ಆರ್. ರವಿಕಾಂತೇಗೌಡ ಆದೇಶಿಸಿದ್ದಾರೆ.