ಬೆಂಗಳೂರು: ಪಾಸ್ಮಾ ಥೆರಪಿಗೆ ಅನುಮತಿ ಸಿಕ್ಕಿರುವುದು ಸಂತಸದ ವಿಷಯವಾಗಿದ್ದು, ಗುಣಮುಖರಾದವರ ಸಹಿ ಪಡೆದು ಅವರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕಣಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಐಸಿಎಂಆರ್ ನವರು ಡಾ. ವಿಶಾಲ್ ರಾವ್ ಅವರಿಗೆ ಪ್ಲಾಸ್ಮಾ ಚಿಕಿತ್ಸೆಗೆ ಅನುಮತಿ ಕೊಟ್ಟಿದ್ದಾರೆ. ಕೊರೊನಾದಿಂದ ಗುಣಮುಖರಾದ ವ್ಯಕ್ತಿಯಿಂದ ಕನಿಷ್ಠ ಇಬ್ಬರಿಂದ ಮೂವರು ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ಮಾಡಬಹುದು. ಈಗ ಒಟ್ಟಾರೆ 129 ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇವರಿಂದ ಎಷ್ಟು ಜನಕ್ಕೆ ಪ್ಲಾಸ್ಮಾ ಚಿಕಿತ್ಸೆ ಮಾಡಬಹುದು ಎಂದು ನೋಡುತ್ತೇವೆ. 300 ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ಕೊಡಬಹುದು, ನಮ್ಮಲ್ಲಿ ಸಧ್ಯ ಅಷ್ಟು ರೋಗಿಗಳೇ ಇಲ್ಲ. ಇದೊಂದು ಒಳ್ಳೆಯ ಬೆಳವಣಿಗೆ ಎಂದರು.
ಬೆಂಗಳೂರು ರೆಡ್ ಜೋನ್ ಇತ್ತು. ಈಗ ಮೂರು ದಿನಗಳಿಂದ ಯಾವ ಪ್ರಕರಣಗಳೂ ಬೆಂಗಳೂರಲ್ಲಿ ಕಂಡು ಬಂದಿರಲಿಲ್ಲ. ಅಷ್ಟರ ಮಟ್ಟಿಗೆ ನಾವು ಒಳ್ಳೆ ಪೊಸಿಷನ್ನಲ್ಲಿದ್ದೇವೆ. ಇಂದು ಮಾತ್ರ ಇಲ್ಲಿಎರಡು ಪ್ರಕರಣ ಕಂಡು ಬಂದಿವೆ. ಒಟ್ಟು ಏಳು ಪ್ರಕರಣ ಇಂದು ಹೊಸದಾಗಿ ಬಂದಿದ್ದು, ಒಟ್ಟು 425 ಪ್ರಕರಣಗಳಾಗಿವೆ.
ಇವತ್ತು ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ರಿಯಲ್ ಟೈಂ ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಕೇವಲ 10 ಪಾಸಿಟಿವ್ ಕೇಸ್‌ಗಳು ಬಂದಿವೆ. ಅಂದರೆ ಪಾಸಿಟಿವ್ ಆಗುವ ಪರ್ಸೆಂಟೇಜ್ ಕಡಿಮೆ ಆಗಿದೆ. ಪರೀಕ್ಷೆ ಮಾಡಿದವರಲ್ಲಿ ಶೇ.0.3 ರಷ್ಟು ಪ್ರಮಾಣ ಮಾತ್ರ ಪಾಸಿಟಿವ್ ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆ, ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ತಪಾಸಣೆ ಮಾಡಲಿದ್ದೇವೆ. ಮೇ ಅಂತ್ಯದ ವೇಳೆಗೆ ಪ್ರತಿ ಜಿಲ್ಲೆಯಲ್ಲಿ ಎರಡು ಲ್ಯಾಬ್‌ಗಳು ಇರಬೇಕು ಎನ್ನುವುದು ನಮ್ಮ ಗುರಿ. ಆನಿಟ್ಟಿನಲ್ಲಿ ಮುಂದುವರೆಯುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರದಿಂದ ಮಾಧ್ಯಮದವರಿಗೆ ಕೊರೊನಾ ತಪಾಸಣೆ ಮಾಡಿಸಲಾಗುತ್ತದೆ. ಕೊರೊನಾ ವಾರಿಯರ್ಸ್ ನಂತರದ ಕೆಲಸ ಮಾಡುತ್ತಿರುವ ಅವರಿಗೆ ಸರ್ಕಾರದ ವೆಚ್ಚದಲ್ಲಿ ಆರೋಗ್ಯ ತಪಾಸಣೆ ಮಾಡಲಿದ್ದು, ಮಾಧ್ಯಮದವರ ನಂತರ ಪೊಲೀಸರಿಗೂ ಕೊರೊನಾ ತಪಾಸಣೆ ಕಾರ್ಯ ನಡೆಸಲು ನಿನ್ನೆ ಆದೇಶ ಮಾಡಿದ್ದೇವೆ. ಇವತ್ತಿನಿಂದ ತಪಾಸಣೆ ಕಾರ್ಯ ಆರಂಭ ಆಗುತ್ತದೆ ಎಂದರು