ಬೆಂಗಳೂರು: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ಸಿದ್ಧತೆ ಕುರಿತ ಚಟುವಟಿಕೆ ಆರಂಭಿಸಿರುವ ರಾಜ್ಯ ಬಿಜೆಪಿ ನಾಯಕರು, ನಾಳೆ ಕಲ್ಯಾಣ ಕರ್ನಾಟಕ, ಮೈಸೂರು ಮತ್ತು ತುಮಕೂರು ಕ್ಲಸ್ಟರ್ಗಳ 13 ಕ್ಷೇತ್ರಗಳ ಸಭೆ ನಡೆಸಲಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹ, ಚುನಾವಣೆ ಎದುರಿಸುವ ಕಾರ್ಯತಂತ್ರದ ಕುರಿತು ಸಮಾಲೋಚನೆ ನಡೆಸಲಾಗುತ್ತದೆ.
ನಗರದ ಹೊರವಲಯದಲ್ಲಿರುವ ರಮಾಡ ಹೋಟೆಲ್ನಲ್ಲಿ ನಾಳೆ ಇಡೀ ದಿನ ಲೋಕಸಭೆ ಕ್ಷೇತ್ರವಾರು ಸಭೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂಗಳಾದ ಡಿ.ವಿ ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಡಿಸಿಎಂಗಳಾದ ಡಾ.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ ಸೇರಿದಂತೆ ಪಕ್ಷದ ಹಿರಿಯ ನಾಯಕರು, ಲೋಕಸಭಾ ಕ್ಷೇತ್ರಗಳವಾರ ಅಪೇಕ್ಷಿತ ನಾಯಕರು ಭಾಗವಹಿಸಲಿದ್ದಾರೆ.
ಕಲ್ಯಾಣ ಕರ್ನಾಟಕ ಕ್ಲಸ್ಟರ್ ಸಭೆ: ಬೆಳಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆವರೆಗೆ ಮೊದಲ ಕ್ಲಸ್ಟರ್ ಆಗಿ ಕಲ್ಯಾಣ ಕರ್ನಾಟಕ ಕ್ಲಸ್ಟರ್ನ ಸಭೆ ನಡೆಯಲಿದೆ. ಕಲ್ಯಾಣ ಕರ್ನಾಟಕ ಕ್ಲಸ್ಟರ್ ನಲ್ಲಿ ಬೀದರ್, ಕಲಬುರ್ಗಿ (ಎಸ್.ಸಿ), ರಾಯಚೂರು ( ಎಸ್.ಟಿ), ಕೊಪ್ಪಳ, ಬಳ್ಳಾರಿ (ಎಸ್.ಟಿ) ಸೇರಿ ಐದು ಕ್ಷೇತ್ರಗಳ ಅಪೇಕ್ಷಿತರೊಂದಿಗೆ ರಾಜ್ಯ ನಾಯಕರು ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ.
ಮೈಸೂರು ಕ್ಲಸ್ಟರ್ ಸಭೆ: ಮಧ್ಯಾಹ್ನ 12.30 ರಿಂದ 3 ಗಂಟೆವರೆಗೆ ಎರಡನೇ ಕ್ಲಸ್ಟರ್ ಆಗಿ ಮೈಸೂರು ಕ್ಲಸ್ಟರ್ ನ ಸಭೆ ನಡೆಯಲಿದೆ. ಮೈಸೂರು ಕ್ಲಸ್ಟರ್ನಲ್ಲಿ ಮೈಸೂರು, ಚಾಮರಾಜನಗರ (ಎಸ್.ಸಿ), ಮಂಡ್ಯ, ಹಾಸನ ಸೇರಿ ನಾಲ್ಕು ಕ್ಷೇತ್ರಗಳ ಅಪೇಕ್ಷಿತರೊಂದಿಗೆ ರಾಜ್ಯ ನಾಯಕರು ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ.
ತುಮಕೂರು ಕ್ಲಸ್ಟರ್ ಸಭೆ: ಸಂಜೆ 4 ಗಂಟೆಯಿಂದ ರಾತ್ರಿ 7 ಗಂಟೆವರೆಗೆ ಮೂರನೇ ಕ್ಲಸ್ಟರ್ ಆಗಿ ತುಮಕೂರು ಕ್ಲಸ್ಟರ್ನ ಸಭೆ ನಡೆಯಲಿದೆ. ತುಮಕೂರು ಕ್ಲಸ್ಟರ್ನಲ್ಲಿ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ (ಎಸ್.ಸಿ) ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಅಪೇಕ್ಷಿತರೊಂದಿಗೆ ರಾಜ್ಯ ನಾಯಕರು ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ.
ಮೊದಲನೇ ಹಂತದಲ್ಲಿ 13 ಕ್ಷೇತ್ರಗಳ ವ್ಯಾಪ್ತಿಯ ಸಭೆ: ಸದ್ಯ ಮೊದಲ ಹಂತವಾಗಿ ನಾಳೆ 13 ಕ್ಷೇತ್ರಗಳ ವ್ಯಾಪ್ತಿಯ ಸಭೆ ನಡೆಯಲಿದ್ದು, ಕೆಲ ಕ್ಷೇತ್ರಗಳಲ್ಲಿ ಹಾಲಿ ಸಂಸದರು ಚುನಾವಣಾ ನಿವೃತ್ತಿ ಪ್ರಕಟಿಸಿರುವುದರಿಂದ ಹೊಸ ಅಭ್ಯರ್ಥಿ ಆಯ್ಕೆ ಮಾಡಬೇಕಿದೆ. ಇನ್ನು ಕೆಲವೆಡೆ ಅಭ್ಯರ್ಥಿ ಬದಲಾವಣೆ ಬೇಡಿಕೆ ಇದೆ. ಹಾಗಾಗಿ ಎಲ್ಲ ಆಯಾಮಗಳಲ್ಲಿಯೂ ವಿಸ್ತೃತವಾದ ಚರ್ಚೆ ನಡೆಸಲಾಗುತ್ತದೆ. ಎರಡನೇ ಹಂತದಲ್ಲಿ ಇನ್ನುಳಿದ 15 ಕ್ಷೇತ್ರಗಳ ಸಭೆಯನ್ನು ಜನವರಿ 13 ರಂದು ರಮಾಡ ಹೋಟೆಲ್ನಲ್ಲಿಯೇ ನಡೆಸಲಿದ್ದು, ಎಲ್ಲ ಕ್ಷೇತ್ರಗಳ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭಿಕ ಸಭೆ ನಡೆಸಿ ಹೈಕಮಾಂಡ್ಗೆ ವರದಿ ಸಲ್ಲಿಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಬಿಜೆಪಿಯಿಂದ ಟಿಕೆಟ್ ಸಿಕ್ಕರೂ ಸಿಗದಿದ್ದರೂ ಸುಮಲತಾ ಸ್ಪರ್ಧೆ ಖಚಿತ: ಹನಕೆರೆ ಶಶಿಕುಮಾರ್