ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಸಮುದಾಯದ ಸ್ವಾಮೀಜಿಗಳು ಸೂಚಿಸಿದಂತೆ ಹೋರಾಟ ನಡೆಸಬೇಕು ಎಂಬ ನಿರ್ಧಾರವನ್ನು ಪೂರ್ವಭಾವಿ ಸಭೆಯಲ್ಲಿ ಕೈಗೊಳ್ಳಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ನಿವಾಸದಲ್ಲಿ ಕುರುಬ ಸಮುದಾಯದ ಸ್ವಾಮೀಜಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಯಿತು. ಪರಿಶಿಷ್ಟ ಪಂಗಡಕ್ಕೆ ಸಮುದಾಯವನ್ನು ಸೇರಿಸುವವರೆಗೂ ಹೋರಾಟ ನಡೆಸಬೇಕು ಎಂಬ ನಿರ್ಧಾರವನ್ನು ಕೈಗೊಳ್ಳಲಾಯಿತು. ಯಾವ ರೀತಿ ಹೋರಾಟ ನಡೆಸಬೇಕು, ಪಾದಯಾತ್ರೆ, ಸಮಾವೇಶಗಳು ಹೀಗೆ ಏನೆಲ್ಲಾ ಅಗತ್ಯವಿದೆಯೋ ಆ ರೀತಿ ಹೋರಾಟ ನಡೆಸುವ ನಿರ್ಧಾರಕ್ಕೆ ಪೂರ್ವಭಾವಿ ಸಭೆ ಬಂದಿತು. ನಿರಂಜನಾನಂದಪುರಿ ಶ್ರೀಗಳು, ಈಶ್ವರಾನಂದಪುರಿ ಶ್ರೀಗಳು, ಶಿವಾನಂದಪುರಿ ಶ್ರೀಗಳು, ಅಮರೇಶ್ವರ ಮಹಾರಾಜ ಶ್ರೀಗಳು ಸೇರಿ ಸೂಚಿಸುವ ರೀತಿ ಹೋರಾಟ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.
ಈ ಕುರಿತು ಮಾಹಿತಿ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ, ಯಾವಾಗ ಹೋರಾಟ ನಡೆಸಬೇಕು, ಯಾವ ರೀತಿ ಹೋರಾಟ ನಡೆಸಬೇಕು ಎನ್ನುವ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವನ್ನು ಸಮುದಾಯದ ಸ್ವಾಮೀಜಿಗಳಿಗೆ ನೀಡಲಾಗಿದೆ. ಸಭೆಯಲ್ಲಿ ಶ್ರೀಗಳ ಸೂಚನೆಯಂತೆ ಮುನ್ನಡೆಯುವ ನಿರ್ಣಯ ಮಾಡಿದ್ದೇವೆ. ಅವರ ನಿರ್ಧಾರವನ್ನು ಎಲ್ಲರೂ ಒಪ್ಪುತ್ತೇವೆ. ಜಾತಿ ಗಣತಿ ವರದಿ ಪ್ರಕಟಗೊಂಡಿಲ್ಲ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿದ್ದು, ಇದರ ಬಗ್ಗೆಯೂ ಸಮುದಾಯದ ಸ್ವಾಮೀಜಿಗಳ ಮೂಲಕ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.