ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಒಂದು ಪತ್ರ ಪ್ರಕಟಿಸಿದರು ಎಂಬ ಕಾರಣಕ್ಕೆ ನಮ್ಮ ಪಕ್ಷದ ಹಲವರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಇದನ್ನು ಖಂಡಿಸಿ ಗೃಹಸಚಿವ ಎಂ.ಬಿ ಪಾಟೀಲ್ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಪಕ್ಷದ ಹಲವರ ಮೇಲೆ ಎಫ್ಐಆರ್ ಹಾಕಿ, ಹೇಮಂತ್ ಅವರನ್ನು ಬಂಧಿಸಿದ್ದಾರೆ. ಇದು ಒಂದು ವರ್ಷದ ಹಳೆಯ ಪ್ರಕರಣ, ಅದೂ ಕೂಡ ಪತ್ರಿಕೆಯಲ್ಲಿ ಪ್ರಕಟವಾಗಿರುವ ಪತ್ರ. ಚುನಾವಣೆ ನಂತರ ಇದ್ದಕ್ಕಿದ್ದಂತೆ ಆ ಪತ್ರದ ಬಗ್ಗೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಕಿರುಕುಳ ಕೊಡುತ್ತಿದೆ. ನಿಜವಾಗಲೂ ಅದು ಗೃಹ ಸಚಿವರ ಹೆಸರಿನ ನಕಲಿ ಪತ್ರ ಎಂದಾದರೆ ಅದರ ಆಳಕ್ಕೆ ಇಳಿದು ಯಾರು ಅದರ ಸೃಷ್ಟಿಕರ್ತರು ಎಂಬುದನ್ನು ಪತ್ತೆ ಹಚ್ಚಲಿ. ಅದನ್ನು ಬಿಟ್ಟು ಅದನ್ನು ಫಾರ್ವರ್ಡ್ ಮಾಡಿದವರನ್ನೆಲ್ಲಾ ಬಂಧಿಸಿ ಕಿರುಕುಳ ಕೊಡುವುದು ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಪತ್ರದ ಬಗ್ಗೆ ತೋರಿಸಿದಷ್ಟೇ ಆಸಕ್ತಿಯನ್ನು ಗೃಹ ಸಚಿವ ಎಂ.ಬಿ ಪಾಟೀಲ್ ಅವರು ಬೇರೆ ಪ್ರಕರಣಗಳ ಬಗ್ಗೆ ಏಕೆ ತೋರಿಸುತ್ತಿಲ್ಲ? ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿಕೊಂಡು ತಿರುಗುತ್ತಿರುವ ಭಗವಾನ್ಗೆ ಪೊಲೀಸ್ ರಕ್ಷಣೆ ಕೊಟ್ಟಿದ್ದಾರೆ. ಸುಧಾ ಬೆಳವಂಗಲ ಅವರ ಬಗ್ಗೆಯೂ ಕ್ರಮವಿಲ್ಲ, ಪ್ರಧಾನಿ ನರೇಂದ್ರ ಮೋದಿ ವಿರುದ್ದ ಅವಹೇಳನಕಾರಿ ಹೇಳಿಕೆ ಕೊಟ್ಟವರ ವಿರುದ್ಧವೂ ಏನೂ ಕ್ರಮ ಇಲ್ಲ. ಇದನ್ನೆಲ್ಲಾ ನೋಡಿದರೆ ಪೊಲೀಸ್ ಇಲಾಖೆ ಎಂ.ಬಿ ಪಾಟೀಲರ ಸೇವೆಗೆ ನಿಂತಿದೆಯಾ ಎಂಬ ಅನುಮಾನ ಬರುವಂತಾಗಿದೆ. ಗೃಹ ಇಲಾಖೆಯ ಈ ನಡವಳಿಕೆ ವಿರುದ್ದ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸಲಿದೆ ಎಂದರು.