ಬೆಂಗಳೂರು : ಗೋಹತ್ಯೆ ನಿಷೇಧ ರಾಜ್ಯದಲ್ಲಿ ಕಠಿಣವಾಗಿ ಜಾರಿಗೆ ತರಲು ಇಲಾಖೆಯಿಂದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ರಾಜ್ಯಪಾಲರಿಂದ ಅಂಕಿತವಾದ ತಕ್ಷಣ ಇಲಾಖೆ ತೀವ್ರಗತಿಯಲ್ಲಿ ಗೋವು ಸಂರಕ್ಷಣೆಯ ಕಾರ್ಯಾಚರಣೆಯಲ್ಲಿ ತೊಡಗಲಿದೆ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಜನಿಸುತ್ತಿರುವ ವಿದೇಶಿ ತಳಿಯ ಗಂಡು ಕರುಗಳನ್ನು ಕಟುಕರಿಗೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಹೊಸ ಕಾಯ್ದೆಯ ಪ್ರಕಾರ ಇದು ಶಿಕ್ಷಾರ್ಹ. ಪಶುಪಾಲಕರು ಗಂಡು ಕರುಗಳನ್ನು ಕನಿಷ್ಠ ೬ ತಿಂಗಳವರೆಗೆ ತಾಯಿಯೊಂದಿಗೆ ಸಾಕಿ ನಂತರ ಕರುವನ್ನು ಗೋಶಾಲೆಗೆ ನೀಡಿ ಎಂದು ಸಚಿವರು ಪಶುಪಾಲಕರಲ್ಲಿ ಮನವಿ ಮಾಡಿದ್ದಾರೆ. ಒಂದು ವೇಳೆ ರೈತರಲ್ಲಿ, ಪಶುಪಾಲಕರಲ್ಲಿ ವಯಸ್ಸಾದ ಗೋವುಗಳಿದ್ದರೆ ಅವುಗಳನ್ನು ವಧೆಗಾಗಿ ಕಟುಕರಿಗೆ ನೀಡದೇ ಹತ್ತಿರದ ಗೋಶಾಲೆಗೆ ನೀಡಬಹುದು. ನಿರುಪಯುಕ್ತ ಎಂದು ರಸ್ತೆಗೆ ಬಿಡುವುದನ್ನು ವಧೆಗೆ ನೀಡುವುದನ್ನು ತಪ್ಪಿಸಿ ಎಂದು ರೈತ ಬಾಂಧವರಲ್ಲಿ ಸಚಿವರು ಮನವಿ ಮಾಡಿದ್ದಾರೆ.
ಸಾರ್ವಜನಿಕರಲ್ಲಿ ಮನವಿ
ರಾಜ್ಯದಲ್ಲಿ 159 ಗೋಶಾಲೆಗಳಿದ್ದು, ಅವುಗಳಲ್ಲಿ 75 ಕ್ಕೂ ಹೆಚ್ಚು ಗೋಶಾಲೆಗಳಿಗೆ ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಈಗಿರುವ ಎಲ್ಲ ಗೋಶಾಲೆಗಳಲ್ಲಿ ಗೋವುಗಳ ಸಾಕಣೆಯ ಸಾಮರ್ಥ್ಯ ಹೆಚ್ಚಿಸಲು ಎಲ್ಲ ಗೋಶಾಲಗೆಳಿಗೆ ತಿಳಿಸಲಾಗಿದೆ. ಗೋವು ಸಾಕಣೆಯಲ್ಲಿ ತೊಂದರೆ ಅನುಭವಿಸುತ್ತಿದ್ದವರು ಗೋಶಾಲೆಗಳಿಗೆ ತಮ್ಮ ಜಾನುವಾರು ಬಿಡಲು ಮುಂದಾದರೆ ಗೋಶಾಲೆಗಳು ಗೋವುಗಳನ್ನು ಪಡೆಯಲು ನಿರಾಕರಿಸುವಂತಿಲ್ಲ. ಹೊಸದಾಗಿ ಗೋಶಾಲೆಗಳನ್ನು ಆರಂಭಿಸುವವರಿಗೆ ಈ ಸಂದರ್ಭದಲ್ಲಿ ಇಲಾಖೆ ಹಾಗೂ ಸರ್ಕಾರದ ಕಡೆಯಿಂದ ಪ್ರೋತ್ಸಾಹ ನೀಡುತ್ತೇವೆ. ಗೋವುಗಳ ಸಂರಕ್ಷಣೆ ಕೇವಲ ಸರ್ಕಾರದ ಹೊಣೆ ಅಂತ ತಿಳಿಯದೇ ಸಾರ್ವಜನಿಕರು ಈ ಕಾರ್ಯದಲ್ಲಿ ಕೈ ಜೋಡಿಸಬಹುದು. ಆಸಕ್ತ ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ಗೋಹತ್ಯೆ ನಿಷೇಧ ವಿಚಾರದಲ್ಲಿ ಸರ್ಕಾರದ ಜೊತೆ ಕೈಜೋಡಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.
ಅಧಿಕಾರಿಗಳಿಗೆ ಎಚ್ಚರಿಕೆ
ರಾಜ್ಯದಲ್ಲಿ ಬೀಡಾಡಿ ದನಗಳ ನಿರ್ವಹಣೆಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಅಂತಹ ದನಗಳನ್ನು ತಕ್ಷಣದಲ್ಲಿ ಹತ್ತಿರದ ಗೋಶಾಲೆಗಳಿಗೆ ಸೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರತಿ ಜಿಲ್ಲಾ ವ್ಯಾಪ್ತಿಯಲ್ಲಿ ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕರು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರೊಂದಿಗೆ ಚರ್ಚಿಸಿ ಸ್ಥಳೀಯವಾಗಿ ಹೊಸದಾಗಿ ಗೋಶಾಲೆಗಳನ್ನು ತೆರೆದು ಮೇವು, ನೀರು, ಚಿಕಿತ್ಸೆ ಹಾಗೂ ಬಿಡಾಡಿ ದನಗಳ ನಿರ್ವಹಣೆಗೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ರಸ್ತೆಯಲ್ಲಿ ಬಿಡಾಡಿ ಜಾನುವಾರು ಕಂಡುಬಂದಲ್ಲಿ ಕ್ರಮ ವಹಿಸದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರ ಮೂಲಕ ಎಲ್ಲ ಹಂತದ ಅಧಿಕಾರಿಗಳಿಗೆ ಸೂಚನೆ ರವಾನಿಸಲು ಹಾಗೂ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಇಲಾಖೆಯ ಹದ್ದಿನ ಕಣ್ಣು
ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರೊಂದಿಗೆ ಸಹ ಸುಧೀರ್ಘವಾಗಿ ಚರ್ಚೆ ಮಾಡಲಾಗಿದ್ದು, ರಾಜ್ಯದೆಲ್ಲೆಡೆ ಅಕ್ರಮವಾಗಿ ನಡೆಯುವ ಗೋವುಗಳ ಸಾಗಣೆ, ವಧೆಯ ಬಗ್ಗೆ ನಿಗಾವಹಿಸಿ ಪಶುಸಂಗೋಪನೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಎಲ್ಲೆಡೆ ಹದ್ದಿನ ಕಣ್ಣಿಡಲು ತಿಳಿಸಲಾಗಿದೆ. ಯಾವುದೇ ಕಾರಣಕ್ಕೂ ಗೋವಂಶದ ಹತ್ಯೆ ಆಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಕೃಷಿ ಹಾಗೂ ಪಶುಸಂಗೋಪನೆ ಚಟುವಟಿಕೆಗಳಿಗಾಗಿ ಸಾಗಣೆ ಮಾಡುವವರಿಗೆ ನೀಡಬೇಕಾದ ಅನುಮತಿ ಪತ್ರಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ.
ರಾಜಕೀಯ ನಾಟಕ
ಸುಗ್ರೀವಾಜ್ಞೆ ಜಾರಿಗೆ ತರುತ್ತಿದ್ದೇವೆ ಎಂದು ತಿಳಿದ ತಕ್ಷಣವೇ ಕಲವು ರಾಜಕೀಯ ನಾಟಕಗಳು ಶುರುವಾಗಿವೆ. ಹಿಂದೂ ಧರ್ಮದಲ್ಲಿ ಗೋವಿಗೆ ಶ್ರೇಷ್ಠವಾದ ಸ್ಥಾನವಿದೆ. ದೇವರ ಸಮಾನವಾಗಿ ತಾಯಿಯ ಸಮಾನವಾಗಿ ಗೋವನ್ನು ಪೂಜಿಸುತ್ತೇವೆ. ಎಲ್ಲ ಶುಭ ಸಂದರ್ಭದಲ್ಲಿ ಗೋವನ್ನು ಪೂಜಿಸುತ್ತೇವೆ, ಗೃಹ ಪ್ರವೇಶ, ಮನೆ ಶುದ್ಧಿಗೆ ಗೋವನ್ನು ಹಾಗೂ ಅದರ ಉತ್ಪನ್ನಗಳನ್ನು ಬಳಸುತ್ತೇವೆ. ಪಂಚಗವ್ಯವನ್ನು ಕೀಟ ನಾಶಕವಗಿ ಸಹ ಬಳಕೆ ಮಾಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲವನ್ನು ತಿಳಿದು ರಾಜಕೀಯ ಕಾರಣಕ್ಕಾಗಿ ಗೋವುಗಳನ್ನು ಕಡೆಗಣಿಸಿ ವಿರೋಧಿಸುತ್ತಿರುವುದು ವಿರೋಧ ಪಕ್ಷದ ನಾಯಕರಿಗೆ ಶೋಭೆ ತರುವುದಿಲ್ಲ.
ಆಹಾರದ ಹಕ್ಕು ಕಸಿಯುತ್ತಿಲ್ಲ
ಮಾಂಸ ತಿನ್ನುವವರ ಹಕ್ಕನ್ನು ಈ ಕಾಯ್ದೆಯ ಮೂಲಕ ಮೊಟಕು ಗೊಳಿಸುತ್ತಿಲ್ಲ. ಈ ಮಸೂದೆಯಲ್ಲೇ ತಿಳಿಸಿದಂತೆ 13 ವರ್ಷಕ್ಕಿಂತ ಮೇಲ್ಪಟ್ಟ ಎಮ್ಮೆ ಮತ್ತು ಕೋಣಗಳನ್ನು ಕೈಬಿಡಲಾಗಿರುವುದರಿಂದ ಆಹಾರದ ಹಕ್ಕನ್ನು ಈ ಕಾಯ್ದೆ ಕಸಿಯುತ್ತಿದೆ ಎಂಬ ಹೇಳಿಕೆಗಳು ನಿರಾಧಾರ. ಈ ಹಿಂದೆ ಇದೇ ಮಸೂದೆಯನ್ನು ಮಂಡಿಸಿದಾಗ ಎಮ್ಮೆ ಮತ್ತು ಕೋಣಗಳನ್ನು ಕೈಬಿಟ್ಟರೆ ಅಂಗೀಕರಿಸಬಹುದು ಎಂದು ಕಾಂಗ್ರೆಸ್ 2010ರ ಅವಧಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದೇ ಅಂಶಗಳು ಈಗಿನ ಮಸೂದೆಯಲ್ಲಿ ಪರಿಗಣನೆಗೆ ತೆಗೆದುಕೊಂಡರೂ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ನ ಇಬ್ಬಗೆ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ದುರ್ಬಲ ಅಂಶ ಪರಿಗಣಿಸಿದ್ದೇವೆ
ಈ ಹಿಂದಿನ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿದ್ದ ಕೆಲವು ದುರ್ಬಲ ಅಂಶಗಳ ಅಧ್ಯಯನ ನಡೆಸಿ ಈಗಿನ ಮಸೂದೆಯಲ್ಲಿ ಆ ಅಂಶಗಳನ್ನು ಬಲಪಡಿಸಿದ್ದೇವೆ. ಶಿಕ್ಷೆ ಮತ್ತು ದಂಡದ ಪ್ರಮಾಣ ಈ ಮಸೂದೆಯಲ್ಲಿ ಹೆಚ್ಚಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಅಕ್ರಮವಾಗಿ ಗೋವುಗಳ ಸಾಗಣೆ ಮತ್ತು ವಧೆ ಮಾಡುವವರಲ್ಲಿ ನಡುಕ ಹುಟ್ಟುತ್ತದೆ ಇದರಿಂದಾಗಿ ಗೋವುಗಳ ಅಕ್ರಮ ಸಾಗಣೆ ಮತ್ತು ವಧೆಗೆ ಕಡಿವಾಣ ಬೀಳುತ್ತದೆ. ನಮ್ಮ ಉದ್ದೇಶ ಶಿಕ್ಷೆ ನೀಡುವುದಲ್ಲ ತಪ್ಪು ಮಾಡದಂತೆ ಗಮನಿಸಿ ಗೋವುಗಳ ಸಂರಕ್ಷಣೆ ಮಾಡುವುದಾಗಿದೆ.
ರಾಜ್ಯದಲ್ಲಿ ಗೋವುಗಳ ಸಂರಕ್ಷಣೆಗೆ ಎಲ್ಲರೂ ಕೈ ಜೋಡಿಸಿ ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಗೋಸಂರಕ್ಷಣೆ ಹೆಚ್ಚು ಯಶಸ್ವಿ ಆಗಲು ರಾಜ್ಯದ ಜನತೆ, ಗೋಪಾಲಕರು, ಸಂಘ ಸಂಸ್ಥೆಗಳು, ಗೋರಕ್ಷಕರು ಸಹಕರಿಸಿ ಎಂದು ರಾಜ್ಯದ ಜನತೆಯಲ್ಲಿ ವಿನಂತಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ