ಬೆಂಗಳೂರು: ಇಲಾಖೆಯ ಬಲವರ್ಧನೆಗೆ ಶ್ರಮಿಸಿ ಇಲ್ಲವೇ ಜಾಗಖಾಲಿ ಮಾಡಿ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದರು. ಕೇಂದ್ರ ಸ್ಥಾನದಲ್ಲಿ ಅಧಿಕಾರಿಗಳು ಇರುವುದೇ ಇಲ್ಲ, ರೈತರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ ಎಂದು ಸಚಿವರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಕೃಷಿಯೊಂದಿಗೆ ರೈತಾಪಿ ವರ್ಗ ಪಶುಸಂಗೋಪನೆಯನ್ನು ಅವಲಂಬಿಸಿದ್ದಾರೆ. ಸಕಾಲದಲ್ಲಿ ಜಾನುವಾರುಗಳ ಆರೋಗ್ಯ ನೋಡಿಕೊಳ್ಳಲು ಅವರೆಲ್ಲ ನಮ್ಮ ಇಲಾಖೆಯನ್ನು ಅವಲಂಬಿಸಿದ್ದಾರೆ. ಇಂತಹ ಸಮಯದಲ್ಲಿ ಕರ್ತವ್ಯಲೋಪವಾದರೆ ಪಶುಪಾಲಕರಿಗೆ ಆರ್ಥಿಕ ಸಂಕಷ್ಟ, ಜಾನುವಾರುಗಳು ಜೀವ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಅರಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದರು.
ಬೇರೆ ರಾಜ್ಯದ ಪಶುವೈದ್ಯರಷ್ಟು ಒತ್ತಡವಿಲ್ಲ
ಉತ್ತರಪ್ರದೇಶದಲ್ಲಿ 17 ಸಾವಿರ ಜಾನುವಾರುಗಳಿಗೆ ಒಬ್ಬ ಪಶುವೈದ್ಯರಿದ್ದಾರೆ ಆದರೆ ನಮ್ಮಲ್ಲಿ ಅಂದಾಜು 4 ಸಾವಿರ ಜಾನುವಾರುಗಳಿಗೆ ಒಬ್ಬ ಪಶು ವೈದ್ಯರಿದ್ದಾರೆ. ಇಂತಹ ಸಮಯದಲ್ಲಿ ನಿರ್ಹವಣೆ ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮಲ್ಲಿ ಹೆಚ್ಚು ಒತ್ತಡವಿಲ್ಲ, ಹೀಗಾಗಿ ಜಾನುವಾರುಗಳಿಗೆ ಹೆಚ್ಚು ಸಮರ್ಪಕವಾಗಿ ಚಿಕಿತ್ಸೆ ನೀಡಬಹುದಾಗಿದೆ. ಹೀಗಾಗಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಣೆ ಮಾಡಿ ಎಂದು ಕಿವಿಮಾತು ಹೇಳಿದರು.
ಗೋಶಾಲೆಗೆ ಸ್ಥಳ ಗುರುತಿಸಿ
ಜಿಲ್ಲೆಗೊಂದು ಗೋಶಾಲೆ ನಿರ್ಮಾಣಕ್ಕೆ ವಿಳಂಬ ಬೇಡ . 21 ಜಿಲ್ಲೆಗಳಲ್ಲಿ ಸ್ಥಳ ಗುರುತಿಸಿ ಹಂಸ್ತಾಂತರ ಕಾರ್ಯ ಸಂಪೂರ್ಣವಾಗಿದ್ದು ಇನ್ನುಳಿದ ಜಿಲ್ಲೆಗಳಲ್ಲಿ ಕೆಲಸ ಆಮೆಗತಿಯಲ್ಲಿ ನಡೆಯುತ್ತಿರುವುದಕ್ಕೆ ಅಧಿಕಾರಿಗಳಿಂದ ಸಚಿವರು ಸ್ಪಷ್ಟನೆ ಕೇಳಿದರು. ಸಮಜಾಯಿಸಿಯನ್ನ ಕೇಳದ ಸಚಿವರು ಜನವರಿ 30ರ ವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸ್ಥಳ ಗುರುತಿಸಿವ ಕಾರ್ಯ ಪೂರ್ಣಗೊಳ್ಳುವುದಲ್ಲದೆ, ಹಂಸ್ತಾಂತರ ಕಾರ್ಯ ಸಹ ಮುಗಿಯಬೇಕು ಮತ್ತು ಗೋಶಾಲೆಗಳು ಆರಂಭ ಆಗಬೇಕು ಇಲ್ಲದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಸಚಿವರು ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ.
ಕಾಲುಬಾಯಿ ರೋಗ ನಿಯಂತ್ರಣ
ಕಾಲುಬಾಯಿ ರೋಗ ರಾಜ್ಯದಲ್ಲಿ ಪುನಃ ಮರುಕಳಿಸದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಸಚಿವರು ಪಶುವೈದ್ಯರಿಗೆ ಸಲಹೆ ನೀಡಿದ್ದಾರೆ. ನಿಯಮಿತವಾಗಿ ಕಾಲುಬಾಯಿ ರೋಗ ಕಂಡುಬರುತ್ತಿರುವ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ನಿಗಾವಹಿಸಿ ಮತ್ತು ಪಶುಚಿಕಿತ್ಸಾ ಶಿಬಿರಗಳನ್ನು ಪ್ರಾರಂಭಿಸಿ, ಯಾವುದೇ ರೋಗ ಲಕ್ಷಣ ಕಂಡುಬಂದಲ್ಲಿ ತಕ್ಷಣಕ್ಕೆ ಲಸಿಕೆ ನೀಡಲು ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚನೆ ನೀಡಿದಾರೆ.
ಗೋವುಗಳ ರಕ್ಷಣೆ
ಗೋಹತ್ಯೆ ನೀಷೆಧ ಜಾರಿಯಾದ ನಂತರದಲ್ಲಿ ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಗೋವುಗಳ ರಕ್ಷಣೆ ಹಾಗೂ 400 ಪ್ರಕರಣಗಳು ರಾಜ್ಯದ್ಯಂತ ದಾಖಲಾಗಿವೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ರಕ್ಷಣೆ ಆದ ಗೋವುಗಳನ್ನು ಅಲ್ಲಲ್ಲಿ ಲಭ್ಯವಿರುವ ಗೋಶಾಲೆಗಳಿಗೆ ಬೀಡಲಾಗಿದ್ದು ಪಶುವೈದ್ಯರು ನಿಯಮಿತವಾಗಿ ಗೋಶಾಲೆಗಳಿಗೆ ಭೇಟಿ ನೀಡಿ ಗೋವುಗಳ ಅರೋಗ್ಯ ತಪಾಸಣೆ ಮಾಡಬೇಕೆಂದು ಸೂಚಿಸಿದರು.
ಚಿಕಿತ್ಸೆಗೆ ಪಶುಸಂಜೀವಿನಿ ಬಳಸಿಕೊಳ್ಳಿ
ರೈತರ ಜಾನುವಾರುಗಳ ಕಲ್ಯಾಣಕ್ಕಾಗಿ ಅನುಷ್ಠಾನಗೊಂಡಿರುವ ಪಶುಸಂಜೀವಿನಿ ತುರ್ತು ಚಿಕಿತ್ಸಾ ವಾಹನವನ್ನು ಹೆಚ್ಚು ಬಳಕೆ ಮಾಡಿಕೊಳ್ಳಿ. ಪಶುಕಲ್ಯಾಣ ಸಹಾಯವಾಣಿಗೆ ಬರುವ ಕರೆಗಳನ್ನ ಆಧರಿಸಿ ರೈತರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಿ ಎಂದು ಪಶುವೈದ್ಯರಿಗೆ ಹೇಳಿದರು. ಇನ್ನು ಪ್ರತಿ ತಿಂಗಳು ಎಷ್ಟು ಚಿಕಿತ್ಸೆ ನೀಡಲಾಗುತ್ತಿದೆ, ಯಾವ ತರಹದ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ ಎಲ್ಲವನ್ನು ಕಚೇರಿಗೆ ತಿಳಿಸಿ ಎಂದು ಸಚಿವರು ಹೇಳಿದ್ದಾರೆ.
ಸಭೆಯಲ್ಲಿ ಪಶುಸಂಗೋಪನೆ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂದೆ ಆಯುಕ್ತರಾದ ಬಸವರಾಜೇಂದ್ರ, ನಿರ್ದೇಶಕ ಮಂಜುನಾಥ ಪಾಳೇಗಾರ ಸೇರಿದಂತೆ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
ಇದನ್ನೂ ಓದಿ:3ನೇ ಅಲೆ ವೇಳೆ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಶೇ.75 ರಷ್ಟು ಬೆಡ್ ಮೀಸಲಿಡಲು ಆಸ್ಪತ್ರೆಗಳಿಗೆ ಸೂಚನೆ