ಬೆಂಗಳೂರು : ಪಿಪಿಇ ಕಿಟ್ ಆರ್ಡರ್ ಮಾಡುವ ಗ್ರಾಹಕರ ಸೋಗಿನಲ್ಲಿ ಆನ್ಲೈನ್ ಖದೀಮರು ಕಂಪನಿಯೊಂದರ ಮಾಲೀಕರಿಗೆ ಸಾವಿರಾರು ರೂಪಾಯಿ ಟೋಪಿ ಹಾಕಿರೋ ಘಟನೆ ನಗರದಲ್ಲಿ ನಡೆದಿದೆ. ಪಿಪಿಇ ಉತ್ಪಾದನೆ ಮಾಡುವ ಕಂಪನಿಯನ್ನು ಗುರಿಯಾಗಿಸಿ ವಂಚಕರು ಕಂಪನಿ ಮಾಲೀಕ ಬೈರೇಶ್ ಎಂಬುವರಿಗೆ ಕರೆ ಮಾಡಿ ಆರ್ಮಿ ಅಧಿಕಾರಿಗಳು ಎಂದು ಪರಿಚಯಿಸಿ ನಮಗೆ ಅರ್ಜೆಂಟಾಗಿ 200ಕ್ಕಿಂತ ಹೆಚ್ಚು ಪಿಪಿಇ ಕಿಟ್ ಬೇಕಿದೆ ಎಂದು ಆರ್ಡರ್ ಮಾಡಿದ್ದಾರೆ.
ಹಣವನ್ನು ಆನ್ಲೈನ್ ಮೂಲಕ ಭರಿಸುವುದಾಗಿ ಭರವಸೆ ನೀಡಿದ್ದಾರೆ. ಮಾಲೀಕರ ಮೊಬೈಲ್ನಲ್ಲಿ ಗೂಗಲ್ ಪೇ ಇರದ ಕಾರಣ ಸಹೋದರ ಮಂಜುನಾಥ್ ಎಂಬುವರ ನಂಬರ್ ಕೊಟ್ಟು ಹಣ ಕಳುಹಿಸುವಂತೆ ವಂಚಕರಿಗೆ ಹೇಳಿದ್ದಾರೆ. ಇದರಂತೆ ವಾಟ್ಸ್‌ಆ್ಯಪ್ ಕರೆ ಮಾಡಿ ಮೊದಲಿಗೆ 5 ರೂ. ಕಳುಹಿಸುತ್ತಿದ್ದು ನಿಮ್ಮ ಮೊಬೈಲ್ಗೆ ಕೂಪನ್ ಬರಲಿದೆ. ಅದನ್ನು ಒತ್ತಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಹಣ ಟ್ರ್ಯಾನ್ಸ್ಫರ್ ಆಗಲಿದೆ ಎಂದು ಖದೀಮರು ಹುಸಿ ಭರವಸೆ ನೀಡಿದ್ದಾರೆ.
ಇದರಂತೆ ಮಂಜುನಾಥ್, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ವಂಚಕರು ಹಂತ ಹಂತವಾಗಿ 16 ಸಾವಿರ ರೂಪಾಯಿ ಎಗರಿಸಿದ್ದಾರೆ. ಹಣ ಕಳೆದುಕೊಂಡ ಬಳಿಕ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಈ ಸಂಬಂಧ ನಗರ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ದೂರು ನೀಡಿದ್ದಾರೆ.