ಬೆಂಗಳೂರು: ''ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕೈಗಾರಿಕೋದ್ಯಮಿಗಳ ಜೊತೆ ನಾಳೆ ಸಿಎಂ ಸಭೆ ನಡೆಸಲಿದ್ದಾರೆ'' ಎಂದು ಸಣ್ಣ ಕೈಗಾರಿಕೆ ಸಚಿವ ಶರಣ ಬಸಪ್ಪ ದರ್ಶನಾಪುರ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಸಣ್ಣ ಕೈಗಾರಿಕೆಗಳಿಂದ ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ''ರಾಜ್ಯದ ಕೆಲವೆಡೆ ಸಣ್ಣ ಕೈಗಾರಿಕೆಗಳ ಸಂಘ ಪ್ರತಿಭಟನೆ ಮಾಡುತ್ತಿದ್ದಾರೆ. ಕೆಇಆರ್ಸಿ ವಿದ್ಯುತ್ ದರ ಹೆಚ್ಚಿಸಿದೆ. ವಿಧಾನಸಭೆ ಚುನಾವಣೆ ವೇಳೆ ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಜೊತೆ ನಾಳೆ ಸಭೆ ಕರೆಯಲಾಗಿದೆ'' ಎಂದರು.
''ಸಭೆಯಲ್ಲಿ ಕೈಗಾರಿಕೆಗಳೋದ್ಯಮಿಗಳು ಭಾಗಿಯಾಗಲಿದ್ದಾರೆ. ಕಾಸಿಯಾ, ಎಫ್ಕೆಸಿಸಿಐ ಪ್ರತಿನಿಧಿಗಳು ಕೂಡಾ ಇರಲಿದ್ದಾರೆ. ಸಮಸ್ಯೆ, ಬೇಡಿಕೆಗಳನ್ನು ಆಲಿಸಲಾಗುವುದು. ಅಂತಿಮವಾಗಿ ಪರಿಹಾರಕ್ಕೆ ಬರಲಾಗುವುದು. ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ'' ಎಂದು ಹೇಳಿದರು.
ಇದನ್ನೂ ಓದಿ: ತಗಡಿನ ಶೆಡ್, ಉರಿಯೋದು ಎರಡೇ ಬಲ್ಬ್... ಬರೋಬ್ಬರಿ 1,03,315 ರೂ ಬಿಲ್ ನೀಡಿದ ಜೆಸ್ಕಾಂ.. ಬಿಲ್ ನೋಡಿ ಶಾಕ್ ಆದ ವೃದ್ದೆ!
''ಸಭೆ ನಡೆಸಿದ ಬಳಿಕ ಕೈಗಾರಿಕೋದ್ಯಮಿಗಳಿಗೆ ಸಮಾಧಾನ ಸಿಗುವ ಭರವಸೆ ಇದೆ. ಅವರ ಬೇಡಿಕೆಗಳನ್ನು ಆಲಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಕೈಗಾರಿಕೆಗಳ ಉಳಿವಿಗೆ ಏನೆಲ್ಲ ಮಾಡಬೇಕು ಅದನ್ನೆಲ್ಲವನ್ನೂ ಮಾಡಲಾಗುವುದು. ಕೈಗಾರಿಕೆಗಳು ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುತ್ತವೆ. ಹಾಗಾಗಿ ಸರ್ಕಾರದ ಮೇಲೆ ಸಾಕಷ್ಟು ಜವಾಬ್ದಾರಿ ಇದೆೆ. ಈ ನಿಟ್ಟಿನಲ್ಲಿ ಸಿಎಂ ನೇತೃತ್ವದ ಸಭೆಯಲ್ಲಿ ಪರಿಹಾರ ಹುಡುಕುತ್ತೇವೆ'' ಎಂದು ಮಾಹಿತಿ ನೀಡಿದರು.
ವಿದ್ಯುತ್ ದರ ಹೆಚ್ಚಿಸಿದ್ದು ಬಿಜೆಪಿ ಸರ್ಕಾರ- ಎಂ.ಬಿ. ಪಾಟೀಲ: ''ವಿದ್ಯುತ್ ದರ ನಮ್ಮ ಸರ್ಕಾರ ಹೆಚ್ಚಳ ಮಾಡಿಲ್ಲ. ಸ್ವಾಯತ್ತತೆ ಹೊಂದಿರುವ ಕೆಇಆರ್ಸಿಯು ವಿದ್ಯುತ್ ದರ ಹೆಚ್ಚಿಸಿದೆ' ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು. ವಿದ್ಯುತ್ ದರ ಹೆಚ್ಚಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಾಧ್ಯಮಗಳೊಂದಿಗೆ ಮಾತನಾಡಿ, ''ವಿದ್ಯುತ್ ದರ ನಮ್ಮ ಸರ್ಕಾರ ಬರುವ ಮೊದಲೇ ಜಾಸ್ತಿ ಮಾಡಲಾಗಿದೆ. ಇದರಿಂದಾಗಿ ವಿದ್ಯುತ್ ಬೆಲೆ ಏರಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಅದನ್ನು ಹಿಂಪಡೆಯಲು ಆಗಲ್ಲ ಎಂದು ಈಗಾಗಲೇ ಮುಖ್ಯಮಂತ್ರಿಗಳು ತಿಳಿಸಿದ್ದಾರೆ" ಎಂದು ಸ್ಪಷ್ಟಪಡಿಸಿದರು.
"ಆದ್ರೂ ಕೂಡ ನಾನು ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡುತ್ತೇನೆ. ವಿದ್ಯುತ್ ದರವನ್ನು ಕೆಇಆರ್ಸಿಯಿಂದ ಆಗಾಗ್ಗೆ ಏರಿಕೆ ಮಾಡುತ್ತದೆ. ಅದನ್ನು ಸರ್ಕಾರ ಮಾಡುವುದಲ್ಲ. ಮುಂದೆಯೂ ಕೂಡ ಕಾಲ ಕಾಲಕ್ಕೆ ವಿದ್ಯುತ್ ದರ ಹೆಚ್ಚಳ ಮಾಡುತ್ತಾರೆ. ಎಲ್ಲರೂ ಸಹಕಾರ ನೀಡಬೇಕು. ಸಿಎಂ ಮತ್ತು ಇಂಧನ ಸಚಿವ ಕೆ.ಜೆ. ಜಾರ್ಜ್ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು" ಎಂದು ಭರವಸೆ ಕೊಟ್ಟರು.
ಇದನ್ನೂ ಓದಿ: ವಿದ್ಯುತ್ ದರ ಏರಿಕೆ: ಬಳ್ಳಾರಿ, ಶಿವಮೊಗ್ಗದಲ್ಲೂ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ