ಬೆಂಗಳೂರು: ವಿಕಲ ಚೇತನರು, ನಡೆಯಲು ಸಾಧ್ಯವಿಲ್ಲದ ಹಿರಿಯರು ಕೂಡಾ ಕೋವಿಡ್ ಭೀತಿಯ ನಡುವೆ ಬಂದು ಯಶವಂತಪುರ ಮತಗಟ್ಟೆಗಳಲ್ಲಿ ಮತದಾನ ಮಾಡಿದ್ದಾರೆ.
ಬಿಬಿಎಂಪಿ ಎಲ್ಲಾ ಹಿರಿಯ ಮತದಾರರಿಗೆ ಪೋಸ್ಟಲ್ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರೂ ನೂರಾರು ಜನರಿಗೆ ಈ ಸೌಲಭ್ಯ ತಲುಪಿಲ್ಲ. ಎಷ್ಟೋ ಜನರಿಗೆ ಇದರ ಮಾಹಿತಿ ಕೂಡ ಇಲ್ಲ ಎನ್ನಲಾಗ್ತಿದೆ. ಯಶವಂತಪುರದ 141, 143, 153ನೇ ಬೂತ್ಗಳಲ್ಲಿ ಹಿರಿಯ ನಾಗರಿಕರು ಬಂದು ಮತದಾನ ಮಾಡುತ್ತಿದ್ದಾರೆ. 90 ವರ್ಷ ಮೇಲ್ಪಟ್ಟ ವೃದ್ಧೆ ನಡೆಯಲು ಸಾಧ್ಯವಿಲ್ಲದಿದ್ದರೂ ಬಂದು ಹಕ್ಕು ಚಲಾಯಿಸಿದ್ದಾರೆ. ಅವರ ಮಗ ನಾಗರಾಜ್ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಬಿಬಿಎಂಪಿ ಅಂಚೆ ಮತದಾನದ ವ್ಯವಸ್ಥೆ ಬಗ್ಗೆ ನಮಗೆ ಗೊತ್ತಿಲ್ಲ. ನಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದರು. ಕಣ್ಣು ಕಾಣದ ಸರೋಜಮ್ಮ ಎಂಬ ವೃದ್ಧೆ ಕೂಡಾ ಮೊಮ್ಮಗನ ಸಹಾಯದೊಂದಿಗೆ ಬಂದು ಮತದಾನ ಮಾಡಿದರು.
388 ಹಿರಿಯ ಮತದಾರರು ಹಾಗೂ 22 ವಿಕಲಚೇತನ ಮತದಾರರು ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ. ಆದರೆ ಇನ್ನೂ ನೂರಾರು ಫಲಾನುಭವಿಗಳಿಗೆ ಈ ಸೌಲಭ್ಯ ತಲುಪಿಯೇ ಇಲ್ಲ ಎಂಬ ಆರೋಪಗಳು ಕೇಳಿಬಂದಿವೆ.