ಬೆಂಗಳೂರು : ರಾಜ್ಯದಲ್ಲಿ ಎರಡು ಕ್ಷೇತ್ರಗಳ ಉಪ ಚುನಾವಣೆ ನಡೆಯುತ್ತಿದೆ. ಕೋವಿಡ್ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ. ವ್ಯಾಕ್ಸಿನ್ ಅಸ್ತ್ರದ ಆತ್ಮವಿಶ್ವಾಸದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಮೈಮರೆತಂತಿವೆ. ರಾಜಕಾರಣಿಗಳೇ ಮೂರನೇ ಅಲೆಗೆ ರಹದಾರಿ ಮಾಡಿಕೊಡುತ್ತಿದ್ದಾರೆಯೇ? ಎನ್ನುವ ಆತಂಕ ಮೂಡಿಸುತ್ತಿದೆ.
2021ರ ಏಪ್ರಿಲ್ನಲ್ಲಿ ಮಸ್ಕಿ ಹಾಗೂ ಬಸವಕಲ್ಯಾಣ ಕ್ಷೇತ್ರಗಳ ಉಪ ಚುನಾವಣೆ ನಡೆದಿದೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರ ಕಾರ್ಯ ನಡೆಸಲಾಗಿತ್ತು. ಸಾರ್ವಜನಿಕ ವಲಯದಿಂದ ಸಾಕಷ್ಟು ಟೀಕೆ ಎದುರಾದರೂ ತಲೆ ಕೆಡಿಸಿಕೊಳ್ಳದೆ ಚುನಾವಣೆಯನ್ನೇ ಪ್ರತಿಷ್ಠೆಯನ್ನಾಗಿ ಮಾಡಿಕೊಂಡು ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪೈಪೋಟಿ ಮೇಲೆ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪ್ರಚಾರ ಕಾರ್ಯ ನಡೆಸಿದ್ದವು. 2ನೇ ಅಲೆಯ ಎಚ್ಚರಿಕೆಯನ್ನು ಕಡೆಗಣಿಸಿ ಉಪ ಚುನಾವಣಾ ಪ್ರಚಾರ ಕಾರ್ಯ ನಡೆಸಲಾಗಿತ್ತು.
ಮಾರ್ಚ್ ಆರಂಭದಲ್ಲಿ ಪ್ರತಿದಿನ 350ರ ಆಸುಪಾಸಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ದಾಖಲಾಗುತ್ತಿದ್ದರೆ, 6 ಸಾವಿರದಷ್ಟು ಸಕ್ರೀಯ ಪ್ರಕರಣಗಳಿದ್ದವು. ಸಾವಿನ ಸಂಖ್ಯೆ ಪ್ರತಿದಿನ 5ರ ಆಸುಪಾಸಿನಲ್ಲಿತ್ತು. ಆದರೆ, ಚುನಾವಣಾ ಪ್ರಚಾರ ಕಾರ್ಯ ನಡೆದ ನಂತರ ಏಪ್ರಿಲ್ ಆರಂಭಕ್ಕೆ ದಿನವೊಂದಕ್ಕೆ 4 ಸಾವಿರ ಪ್ರಕರಣ ದಾಖಲಾಗಲು ಶುರುವಾಯಿತು. ಸಕ್ರಿಯ ಪ್ರಕರಣಗಳ ಸಂಖ್ಯೆ 30 ಸಾವಿರಕ್ಕೆ ಹೆಚ್ಚಳಗೊಂಡಿತು.
ಕೋವಿಡ್ ನಿಯಂತ್ರಣಕ್ಕೆ ಹರಸಾಹಸ
ಸಾವಿನ ಸಂಖ್ಯೆ 15-20ಕ್ಕೆ ಹೆಚ್ಚಳವಾಯಿತು. ನಂತರ ಮೇ ತಿಂಗಳ ಆರಂಭಕ್ಕೆ ಕೋವಿಡ್ ಸ್ಫೋಟಗೊಂಡಿತ್ತು. ಪ್ರತಿ ದಿನದ ಹೊಸ ಪ್ರಕರಣಗಳ ಸಂಖ್ಯೆ 40 ಸಾವಿರಕ್ಕೆ ಹೆಚ್ಚಳವಾಯಿತು. ಸಕ್ರೀಯ ಪ್ರಕರಣಗಳ ಸಂಖ್ಯೆ 4 ಲಕ್ಷ ತಲುಪಿ, ಸಾವಿನ ಪ್ರಮಾಣ ದಿನಕ್ಕೆ 250 ಅನ್ನು ದಾಟಿತ್ತು. ಪರಿಣಾಮ ರಾಜ್ಯವನ್ನು ವೈರಸ್ ತನ್ನ ಕಪಿಮುಷ್ಠಿಗೆ ತೆಗೆದುಕೊಂಡಿತ್ತು. ಆಕ್ಸಿಜನ್, ಐಸಿಯು ಬೆಡ್ಗಳಿಗೆ ಹಾಹಾಕಾರ ಎದ್ದಿತ್ತು. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡಬೇಕಾಯಿತು.
ಕೇವಲ ಮೂರು ತಿಂಗಳಿನಲ್ಲೇ ಊಹೆಗೂ ಮೀರಿದ ರೀತಿ ಕೊರೊನಾ ಸ್ಫೋಟಗೊಂಡು ರಾಜ್ಯವನ್ನು ತಲ್ಲಣಗೊಳಿಸಿ ಮತ್ತೆ ಲಾಕ್ಡೌನ್ಗೆ ತಳ್ಳಿತ್ತು. ಇದರಲ್ಲಿ ಉಪ ಚುನಾವಣಾ ಪ್ರಚಾರದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದರ ಕೊಡುಗೆಯೂ ದೊಡ್ಡದಿದೆ. ತಜ್ಞರ ಎಚ್ಚರಿಕೆ ನಡುವೆಯೂ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಮೈಮರೆತ ಪರಿಣಾಮ 2ನೇ ಅಲೆ ಅತ್ಯಂತ ವೇಗವಾಗಿ ರಾಜ್ಯವನ್ನು ಆವರಿಸಿಕೊಂಡಿತ್ತು.
ತಜ್ಞರು ಸಾಕಷ್ಟು ಎಚ್ಚರಿಕೆ ನೀಡುತ್ತಿದ್ದಾರೆ
ಇದೀಗ ರಾಜ್ಯದಲ್ಲಿ 3ನೇ ಅಲೆಯ ಭೀತಿ ಎದುರಾಗಿದೆ. ಮೈಮರೆಯದಂತೆ ತಜ್ಞರು ಸಾಕಷ್ಟು ಎಚ್ಚರಿಕೆ ನೀಡುತ್ತಿದ್ದಾರೆ. ಆದರೂ, ಉಪ ಚುನಾವಣಾ ಪ್ರಚಾರ ಕಾರ್ಯದಲ್ಲಿ ಕೋವಿಡ್ ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆ ಎದ್ದು ಕಾಣುತ್ತಿದೆ.
ಸದ್ಯ 1ನೇ ತರಗತಿಯಿಂದ ಭೌತಿಕ ತರಗತಿಗಳು ಆರಂಭಗೊಂಡಿವೆ. ಶೈಕ್ಷಣಿಕ ವ್ಯವಸ್ಥೆ ಕೊರೊನಾ ಮಾರ್ಗಸೂಚಿಯಂತೆ ಪುನಾರಂಭಗೊಂಡಿದೆ. ಎಲ್ಲಾ ಕ್ಷೇತ್ರಗಳಿಗೂ, ವಲಯಗಳಿಗೂ ಕೋವಿಡ್ ನಿಯಮದ ಷರತ್ತು ವಿಧಿಸಲಾಗುತ್ತಿದ್ದರೂ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಾತ್ರ ಎಲ್ಲವನ್ನೂ ಗಾಳಿಗೆ ತೂರಲಾಗುತ್ತಿದೆ.
ಶೇ. 87ರಷ್ಟು ಜನರಿಗೆ ಕೋವಿಡ್ ಮೊದಲನೇ ಡೋಸ್ ಲಸಿಕೆ ನೀಡಲಾಗಿದೆ. ಶೇ. 40ರಷ್ಟು 2ನೇ ಡೋಸ್ ಲಸಿಕೆ ನೀಡಲಾಗಿದೆ. ಲಸಿಕಾ ಅಭಿಯಾನಕ್ಕೆ ಆದ್ಯತೆ ನೀಡಲಾಗಿದೆ. ಲಸಿಕೆಯೇ ಕೋವಿಡ್ಗೆ ರಾಮಬಾಣ ಎನ್ನುತ್ತಾ ಸರ್ಕಾರ ಮೈಮರೆತು ಕುಳಿತಿದೆ. ಈ ಅತಿಯಾದ ಆತ್ಮವಿಶ್ವಾಸವೇ ಕುತ್ತು ತರುತ್ತಾ ಎನ್ನುವ ಪ್ರಶ್ನೆ ಮೂಡಿದೆ.
ಎಲ್ಲಾ ಪಕ್ಷಗಳು- ಕಾರ್ಯಕರ್ತರು ಮೈಮರೆತಿದ್ದಾರೆ
ಕೇವಲ ಒಂದು ಡೋಸ್ ಪಡೆದವರು ಸುಲಭವಾಗಿ ಕೋವಿಡ್ ಸೋಂಕಿಗೆ ಸಿಲುಕುವ ಸಾಧ್ಯತೆ ಇದೆ. ಅಪಾಯದ ಪ್ರಮಾಣ ಕಡಿಮೆ ಇದ್ದರೂ ಸೋಂಕು ಹರಡುವ ತೀವ್ರತೆ ಹೆಚ್ಚಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದರೂ, ಚುನಾವಣಾ ಪ್ರಚಾರದಲ್ಲಿ ಇದ್ಯಾವುದನ್ನೂ ಪರಿಗಣಿಸದೇ ಲಸಿಕೆ ಪಡೆಯಲಾಗಿದೆ ಎನ್ನುವ ಅತಿಯಾದ ಆತ್ಮವಿಶ್ವಾಸದಿಂದ ಎಲ್ಲಾ ಪಕ್ಷಗಳು, ಕಾರ್ಯಕರ್ತರು ಮೈಮರೆತಿದ್ದಾರೆ. ಇದು ಭವಿಷ್ಯದಲ್ಲಿ ಸೋಂಕು ಹೆಚ್ಚಾಗಲು ಕಾರಣವಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಮಾರ್ಚ್ನಲ್ಲಿ 2ನೇ ಅಲೆ ಸ್ಫೋಟಕ್ಕೆ ಕಾರಣ ಏನೇ ಇದ್ದರೂ ಗುಂಪುಗೂಡುವಿಕೆಗೆ ಉಪ ಸಮರ ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಈಗಲೂ ಅಂತಹ ಸನ್ನಿವೇಶವೇ ಎದುರಾಗಿದೆ. ಒಂದು ವೇಳೆ ಈಗೇನಾದರೂ ಮೂರನೇ ಅಲೆ ಸ್ಫೋಟಗೊಂಡರೆ ಅದಕ್ಕೆ ಉಪ ಸಮರದ ಕೊಡುಗೆಯೂ ದೊಡ್ಡದಾಗಲಿದೆ ಎಂದು ಹೇಳಲಾಗುತ್ತಿದೆ.
ರೂಪಾಂತರಕ್ಕೆ ಅವಕಾಶ
ಈ ಕುರಿತು ತಜ್ಞರ ಸಮಿತಿಯ ಡಾ. ಸಿ. ಎನ್ ಮಂಜುನಾಥ್ ಮಾಹಿತಿ ನೀಡಿದ್ದು, ಡಿಸೆಂಬರ್ವರೆಗೂ ಗುಂಪುಗೂಡಿಕೆಯಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ. ಗುಂಪುಗೂಡುವಿಕೆಯಿಂದ ರೂಪಾಂತರಕ್ಕೆ ನಾವೇ ಅವಕಾಶ ನೀಡಿದಂತಾಗಲಿದೆ. ಮುನ್ನೆಚ್ಚರಿಕೆ ಬಹಳ ಅಗತ್ಯವಾಗಿದೆ. ಸದ್ಯ ಸಂಪೂರ್ಣವಾಗಿ ಕೊರೊನಾ ಸೋಂಕು ಹೋಗಿಲ್ಲ. ಕಡೆ ಪಕ್ಷ ಡಿಸೆಂಬರ್‌ವರೆಗಾದರೂ ಅಂತರ ಕಾಯ್ದುಕೊಳ್ಳಬೇಕು. ಪದೇಪದೆ ಸೋಂಕು ಹರಡುತ್ತಿದ್ದರೆ ರೂಪಾಂತರಕ್ಕೆ ಅವಕಾಶ ನೀಡಿದಂತಾಗಲಿದೆ.
ಈಗ ನಮಗೆ 3ನೇ ಅಲೆ ಎದುರಾಗುವ ಸಾಧ್ಯತೆ ಇದೆ. ಶೇ.99ರಷ್ಟು ಲಸಿಕೆ ಪಡೆದವರಿಗೆ ರೋಗನಿರೋಧಕ ಶಕ್ತಿ ಇರಲಿದೆ. ಆದರೂ, ಹೊಸ ರೂಪಾಂತರಿ ಬಂದರೆ ಕಷ್ಟ. ಹಳೆ ವೈರಸ್ ಇದ್ದರೆ 3ನೇ ಅಲೆ ಇಷ್ಟು ತೀವ್ರತೆ ಇರುವುದಿಲ್ಲ. ಆದರೆ, ಈಗ ಹೊಸ ವೈರಸ್ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹೊಸ ತಳಿಯ ವೈರಸ್ ಮಾಹಿತಿ ತಡವಾಗಿ ಬಹಿರಂಗ
ರಾಜ್ಯದಲ್ಲಿ ಹೊಸ ರೂಪಾಂತರಿ ವೈರಸ್ ಎವೈ 4. 2 ಕಾಣಿಸಿಕೊಂಡಿದೆ. 3ನೇ ಅಲೆ ಗಂಭೀರವಾಗುವ ಸಾಧ್ಯತೆ ಇದೆ ಎನ್ನುವ ಹೊಸ ಆತಂಕ ಸೃಷ್ಟಿಸಿದೆ. ಇದು ಲಸಿಕೆ ಪಡೆದವರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಹಾಗಾಗಿ, ತಜ್ಞರಲ್ಲಿ ಈ ಬಗ್ಗೆ ಆತಂಕವಿದೆ. ಆದರೆ, ಸರ್ಕಾರ ಮಾತ್ರ ಇದರ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಹೊಸ ತಳಿಯ ವೈರಸ್ ಮಾಹಿತಿಯನ್ನು ತಡವಾಗಿ ಬಹಿರಂಗಪಡಿಸಿದೆ ಎನ್ನಲಾಗುತ್ತಿದೆ.
ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ರಾಜ್ಯದಲ್ಲಿ ಮತ್ತೆ ಕೊರೊನಾ ಸ್ಪೋಟವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಕೋವಿಡ್ ವ್ಯಾಕ್ಸಿನ್ ಹಾಕಿಸಲಾಗಿದೆ ಎಂದು ಮೈ ಮರೆಯದೆ ಕೋವಿಡ್ ಮಾರ್ಗಸೂಚಿ ಪಾಲಿಸಿ ನಾಗರಿಕರಿಗೆ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಮಾದರಿಯಾಗಬೇಕಿದೆ.