ಬೆಂಗಳೂರು: ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಸಾವಿಗೆ ರಾಜಕೀಯ ಗಣ್ಯರಾದ ತಿಪ್ಪಾರೆಡ್ಡಿ, ಸತೀಶ್ ಜಾರಕಿಹೋಳಿ, ವೈ.ಎ.ನಾರಾಯಣಸ್ವಾಮಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸಂತಾಪ ಸೂಚಿಸಿದ್ದಾರೆ.
ಸಿದ್ದಾರ್ಥ್ ನನಗೆ ತುಂಬಾ ಹಿಂದಿನಿಂದಲೂ ಪರಿಚಯ. ಬಹಳ ಸರಳ ಮತ್ತು ಸಹಾಯ ಮಾಡುವಂತಹ ಮನಸ್ಸು ಅವರದ್ದು. ನಮ್ಮ ದೇಶ ಮತ್ತು ರಾಜ್ಯದ ಸಾವಿರಾರು ಯುವಕ, ಯುವತಿಯರಿಗೆ ಉದ್ಯೋಗ ನೀಡುವ ಮೂಲಕ ಸಹಾಯ ಮಾಡಿದ್ದಾರೆ. ಅವರ ಸಾವಿನಿಂದ ದೇಶ ಒಳ್ಳೆಯ ಉದ್ಯಮಿಯನ್ನು ಕಳೆದುಕೊಂಡಂತಾಗಿದೆ. ಸಿದ್ದಾರ್ಥ್ ಸಾವು ಕರ್ನಾಟಕಕ್ಕೆ ಅಲ್ಲ ಭಾರತಕ್ಕೆ ಲಾಸ್ ಎಂದು ಬಿಜೆಪಿಯ ತಿಪ್ಪಾರೆಡ್ಡಿ ಹೇಳಿದ್ದಾರೆ.
ಸಿದ್ದಾರ್ಥ್ ಸಾವಿನಿಂದ ರಾಜ್ಯಕ್ಕೆ ಮತ್ತು ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಸಂಭಾವಿತ, ಬುದ್ಧಿವಂತ, ಶ್ರಮವಂತ, ದೊಡ್ಡ ಮಟ್ಟದಲ್ಲಿ ಉದ್ಯಮವನ್ನು ಪ್ರಾರಂಭಿಸಿ ದೇಶ ವಿದೇಶಗಳಲ್ಲಿ ಕರ್ನಾಟಕ ರಾಜ್ಯದ ಕಾಫಿಯ ಸೊಗಡನ್ನು ಪರಿಚಯ ಮಾಡಿದರು. ಸುಮಾರು 50ರಿಂದ 60 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಒಂದು ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ರು. ಅವರ ಸಾವು ನನಗೆ ತುಂಬಾ ನೋವು ತಂದಿದೆ. ಅವರ ಸಾವು ಹೀಗೆ ಆಗಬಾರದಿತ್ತು ಎಂದು ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಕಂಬನಿ ಮಿಡಿದಿದ್ದಾರೆ.
ಸಿದ್ದಾರ್ಥ್ ಕರ್ನಾಟದ ಒಬ್ಬ ಉತ್ತಮ ಉದ್ಯಮಿ. ತನ್ನ ಹೋರಾಟದಿಂದ ಬ್ಯುಸಿನೆಸ್ನಲ್ಲಿ ಹೆಸರು ಮಾಡಿದ್ರು. ಅವರ ಸಾವಿನಿಂದ ಕರ್ನಾಟಕಕ್ಕೆ ದೊಡ್ಡ ನಷ್ಟವಾಗಿದೆ. ಅವರ ಸಾವಿನ ಕುರಿತು ಸಮಗ್ರ ತನಿಖೆ ನಡೆದರೆ ಸತ್ಯ ಹೊರ ಬರುತ್ತದೆ ಎಂದು ಸತೀಶ್ ಜಾರಕಿಹೋಳಿ ಹೇಳಿದ್ದಾರೆ..