ಬೆಂಗಳೂರು : ನಾಳೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಲಿದ್ದು, ಇಂದಿನಿಂದಲೇ ಫೀಲ್ಡಿಗಿಳಿದಿರುವ ನಗರ ಪೊಲೀಸರು ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದಾರೆ.
ಇಂದು ಭಾನುವಾರವಾದ್ದರಿಂದ ಮಾಂಸದಂಗಡಿಗಳ ಮುಂದೆ ಜನ ಜಂಗುಳಿ ಕಂಡುಬಂತು. ಲಾಕ್ ಡೌನ್ ಜಾರಿಯಾಗಲಿರುವುದರಿಂದ ಅಗತ್ಯ ಸಾಮಾಗ್ರಿಗಳ ಖರೀದಿಗೂ ಜನ ಮುಗಿಬಿದ್ದಿದ್ದರು. ಹೀಗಾಗಿ, ನಗರದ ಕೆ.ಆರ್ ಮಾರ್ಕೆಟ್, ಮಲ್ಲೇಶ್ವರ, ಯಶವಂತಪುರ ಸೇರಿದಂತೆ ಹಲವು ಕಡೆಗಳಲ್ಲಿ ಜನಸಾಗರ ಕಂಡು ಬಂತು. ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಹಾಕದವರಿಗೆ ಬಿಬಿಎಂಪಿ ಮಾರ್ಷಲ್ಗಳು ದಂಡ ವಿಧಿಸಿದರು.
ಓದಿ : ಬೆಂಗಳೂರಲ್ಲಿ ಮೇ 1 - 24 ರವರೆಗೆ 144 ಸೆಕ್ಷನ್ ಜಾರಿ: ನಗರ ಪೊಲೀಸ್ ಆಯುಕ್ತರಿಂದ ಆದೇಶ
10 ಗಂಟೆ ಬಳಿಕ ಹೊಯ್ಸಳ ವಾಹನದ ಮೂಲಕ ಸಿಟಿ ರೌಂಡ್ ಹೊಡೆದ ಪೊಲೀಸರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಅವಧಿ ಮೀರಿಯೂ ವ್ಯಾಪಾರ ನಡೆಸುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ಬೊಮ್ಮನಹಳ್ಳಿ, ತುಮಕೂರು ರಸ್ತೆ, ಹಳೆ ಮದ್ರಾಸ್ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿಯೊಂದು ವಾಹನಗಳನ್ನು ಪೊಲೀಸರು ತಪಾಸಣೆಗೊಳಪಡಿಸುತ್ತಿದ್ದಾರೆ. ಈ ವೇಳೆ ಕೆಲ ವಾಹನ ಸವಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವುದು ಕಂಡು ಬಂತು. ಅನಗತ್ಯವಾಗಿ ಓಡಾಡುವುದಲ್ಲದೆ ವಾಗ್ವಾದ ನಡೆಸಿದವರಿಗೂ ಪೊಲೀಸರು ಲಾಠಿಯಿಂದ ಪಾಠ ಹೇಳಿದರು.