ಬೆಂಗಳೂರು: ಇಂದು ವಿಶ್ವಾಸ ಮತಯಾಚನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ವಿಧಾನಸೌಧದ ಬಂದೋಬಸ್ತ್ಗಾಗಿ ಸಾವಿರ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಗೇಟ್ ನಂ.1ರಲ್ಲಿ ವಿಐಪಿಗಳು ಹಾಗೂ ವಿಧಾನಸೌಧ ಸಿಬ್ಬಂದಿಗೆ ಪ್ರವೇಶ, ಗೇಟ್ ನಂ.2 ರಲ್ಲಿ ಪತ್ರಕರ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಧಾನಸೌಧಕ್ಕೆ ಶಾಸಕರು ಹಾಗೂ ಅವರ ಆಪ್ತ ಕಾರ್ಯದರ್ಶಿಗಳಿಗೆ ಮಾತ್ರ ಪ್ರವೇಶ ವಿದ್ದು, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಪ್ರತಿಭಟನೆಗೆ ಬ್ರೇಕ್ ಹಾಕಲಾಗಿದೆ ಎಂದಿದ್ದಾರೆ.
ಇನ್ನು ವಿಧಾನಸೌಧ ಸುತ್ತಮುತ್ತ ಪೊಲೀಸ್ ಸರ್ಪಗಾವಾಲು ಹಾಕಲಾಗಿದ್ದು, ಎಲ್ಲಾ ದ್ವಾರಗಳಲ್ಲಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ನೇತೃತ್ವದಲ್ಲಿ ಓರ್ವ ಹೆಚ್ಚುವರಿ ಪೊಲೀಸ್ ಆಯುಕ್ತ, 5 ಡಿಸಿಪಿಗಳು, 20 ಎಸಿಪಿಗಳು, 25 ಕೆಎಸ್ಆರ್ಪಿ ತುಕಡಿ, 21 ಸಿಎಆರ್ ತುಕಡಿ, ಕ್ಷಿಪ್ರ ಕಾರ್ಯಚರಣೆ ಪಡೆ ಮತ್ತು ವಾಟರ್ ಜೆಟ್, ಹೊಯ್ಸಳ, ಪೊಲೀಸರನ್ನ ನಿಯೋಜನೆ ಮಾಡಲಾಗಿದ್ದು, ಸಿಸಿಟಿವಿ ವ್ಯವಸ್ಥೆ ಕೂಡ ಮಾಡಲಾಗಿದೆ.
ವಿಧಾನಸೌಧ ಸುತ್ತ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಐದಕ್ಕಿಂತ ಹೆಚ್ಚು ಜನ ಗುಂಪು ಸೇರುವುದು, ಸಂಭ್ರಮಾಚರಣೆ, ಘೋಷಣೆ ಕೂಗುವುದು, ಪ್ರತಿಭಟನೆ, ಧರಣಿ, ಸತ್ಯಾಗ್ರಹ ನಡೆಸುವುದಕ್ಕೆ ನಿಷೇಧ ಮಾಡಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.
ಶಕ್ತಿಸೌಧದಲ್ಲಿ ಭದ್ರತಾ ಪರಿಶೀಲನೆ:
ಶಕ್ತಿಸೌಧದ ಎಲ್ಲಾ ದ್ವಾರಗಳು ಹಾಗೂ ಕೊಠಡಿಗಳಲ್ಲಿ ಭದ್ರತಾ ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿಂದೆ ವಿಧಾನಸೌಧದ ಒಳಗೆ ನಾಯಕರು ಬಲವಂತವಾಗಿ ಕೊಠಡಿಗೆ ಕರೆದುಕೊಂಡು ಹೋದರು ಎಂಬ ಆರೋಪಗಳು ಕೇಳಿಬಂದಿದ್ದವು. ಇಂದು ಜರುಗಲಿರುವ ಕಲಾಪದಲ್ಲಿ ಯಾವುದೇ ಅಹಿತಕರ ಘಟನೆಗಳು ಆಗಬಾರದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತಾ ಪರಿಶೀಲನೆ ನಡೆಸುತ್ತಿದ್ದಾರೆ.