ಬೆಂಗಳೂರು: ಯುವಕನನ್ನು ಕಿಡ್ನಾಪ್ ಮಾಡಿ ತಡರಾತ್ರಿ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಅಪಹರಣಕಾರರನ್ನು 2 ಕಿಲೋ ಮೀಟರ್‌ಗಳಷ್ಟು ದೂರ ಬೆನ್ನಟ್ಟಿ ಯುವಕನ ರಕ್ಷಿಸುವ ಜೊತೆಗೆ ಓರ್ವ ಅರೋಪಿಯನ್ನು ಬಂಧಿಸುವಲ್ಲಿ ಆಡುಗೋಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಗೋಪಿ ಪೊಲೀಸರಿಗೆ ಸೆರೆ ಸಿಕ್ಕ ಆರೋಪಿ. ಪ್ರಕರಣದಲ್ಲಿ ಮೂವರು ಪರಾರಿಯಾಗಿದ್ದಾರೆ. ಅಪಹರಣಕ್ಕೊಳಗಾದ ತೌಹೀದ್ ಎಂಬಾತನನ್ನು ಪೊಲೀಸರು ರಕ್ಷಿಸಿದ್ದಾರೆ.
ಮಧ್ಯರಾತ್ರಿ ಪೊಲೀಸ್ ಕಾರ್ಯಾಚರಣೆ: ಇನ್ಸ್ಪೆಕ್ಟರ್ ಮಂಜುನಾಥ್ ರಾತ್ರಿಪಾಳಿಯಲ್ಲಿ ಕೋರಮಂಗಲದ 100 ಅಡಿ ರಸ್ತೆಯ ಚೆಕ್ ಪೋಸ್ಟ್ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ರಾತ್ರಿ 11.40 ರ ಸುಮಾರಿಗೆ ವೇಗವಾಗಿ ಬಂದ ಹೋಂಡಾ ಸಿಟಿ ಕಾರೊಂದು ಬ್ಯಾರಿಕೇಡ್ಗೆ ಗುದ್ದಿದೆ. ಚಾಲಕ ವೇಗವಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದಾಗ ಕಾರಿನಲ್ಲಿದ್ದ ತೌಹಿದ್ ಕಾಪಾಡಿ..ಕಾಪಾಡಿ ಎಂದು ಕೂಗಿದ್ದಾನೆ. ಅಪಹರಣವಾಗಿರುವ ಮುನ್ಸೂಚನೆ ಅರಿತ ಇನ್ಸ್ಪೆಕ್ಟರ್ ಮಂಜುನಾಥ್, ಪೊಲೀಸ್ ಜೀಪ್ನಲ್ಲಿ ಆರೋಪಿಗಳ ಕಾರನ್ನು 2 ಕಿ.ಮೀ ಚೇಸ್ ಮಾಡಿದ್ದಾರೆ. ಕೋರಮಂಗಲ ವಾಟರ್ ಟ್ಯಾಂಕ್ ಜಂಕ್ಷನ್ ಬಳಿ ಆರೋಪಿಗಳ ಕಾರನ್ನು ಪೊಲೀಸರು ಅಡ್ಡಗಟ್ಟಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ನಾಲ್ವರು ಆರೋಪಿಗಳಲ್ಲಿ ಮೂವರು ಎಸ್ಕೇಪ್ ಆಗಿದ್ದು, ಗೋಪಿ ಎಂಬಾತ ಸಿಕ್ಕಿಬಿದ್ದಿದ್ದಾನೆ. ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ತೌಹೀದ್‌ನನ್ನು ಕಿಡ್ನಾಪ್ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಡರಾತ್ರಿವರೆಗೂ ಕಾದು ಕುಳಿತಿದ್ದ ತೌಹಿದ್ ಕುಟುಂಬ: ಕಳೆದ ಮೂರು ದಿನಗಳ ಹಿಂದೆ ತೌಹಿದ್ನನ್ನು ಆರೋಪಿಗಳು ಬಂಡೆಪಾಳ್ಯದಲ್ಲಿ ಅಪಹರಿಸಿ ಗೌಪ್ಯ ಸ್ಥಳದಲ್ಲಿಟ್ಟಿದ್ದರು. ಯುವಕನ ಕುಟುಂಬಸ್ಥರಿಗೆ ಕರೆ ಮಾಡಿ 60 ಸಾವಿರ ರೂ ನೀಡಿದರೆ ಬಿಟ್ಟು ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು. ಪೊಲೀಸರಿಗೆ ಕಿಡ್ನಾಪ್ ವಿಚಾರ ತಿಳಿಸಿದ್ರೆ ಕೊಲೆ ಮಾಡುವುದಾಗಿಯೂ ಹೆದರಿಸಿದ್ದರು. ಹೀಗಾಗಿ, ನಿನ್ನೆ ಸಂಜೆ ತೌಹಿದ್ ತಾಯಿ 35 ಸಾವಿರ ಹಣವನ್ನು ಆರೋಪಿಗಳಿಗೆ ನೀಡಿದ್ದರು. ಹಣ ಕೊಟ್ಟ ಮೇಲೂ ಆರೋಪಿಗಳು ತೌಹಿದ್ನನ್ನು ಬಿಟ್ಟು ಕಳುಹಿಸಿರಲಿಲ್ಲ. ಹೀಗಾಗಿ, ಮಡಿವಾಳ ಪೊಲೀಸ್ ಠಾಣೆಗೆ ತಡರಾತ್ರಿ ದೂರು ನೀಡಲು ಕುಟುಂಬ ಆಗಮಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೆಂಗಳೂರಲ್ಲಿ ಕಿಡ್ನಾಪ್, ಚಿಕ್ಕಬಳ್ಳಾಪುರದಲ್ಲಿ ಕೊಲೆ, ಚಾರ್ಮಾಡಿಯಲ್ಲಿ ಶವ!
ಯುವಕನ ರಕ್ಷಿಸಿ ಪೋಷಕರಿಗೆ ಒಪ್ಪಿಸಿದ ಪೊಲೀಸರು: ಆಡುಗೋಡಿ ಪೊಲೀಸರು ಆರೋಪಿಗಳ ಸಂಚು ಅರಿತು ಸೂಕ್ತ ಕಾರ್ಯಾಚರಣೆ ನಡೆಸುವ ಮೂಲಕ ಯುವಕನನ್ನು ರಕ್ಷಿಸಿ ಮಡಿವಾಳದಲ್ಲಿದ್ದ ಪೋಷಕರಿಗೆ ಒಪ್ಪಿಸಿದ್ದಾರೆ. ತೌಹಿದ್ ಕೂಡ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಈತನ ವಿರುದ್ಧ ಸಹ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಬಂಡೆಪಾಳ್ಯ ಪೊಲೀಸರ ವಶದಲ್ಲಿರುವ ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಿದ ಬಳಿಕ ಇನ್ನಷ್ಟು ಮಾಹಿತಿ ತಿಳಿಯಲಿದೆ.
ಇದನ್ನೂ ಓದಿ: 1 ಕೋಟಿ ನಗದು, 15 ಕೆಜಿ ಚಿನ್ನಕ್ಕಾಗಿ ಉದ್ಯಮಿ ಪುತ್ರನ ಕಿಡ್ನಾಪ್: ಅಪಹರಣಕಾರರು ಅರೆಸ್ಟ್