ಬೆಂಗಳೂರು : ವೈದ್ಯಕೀಯ ವೆಚ್ಚ ಭರಿಸದ ಕಾರಣ ಶವ ನೀಡಲು ನಿರಾಕರಿಸಿದ ಖಾಸಗಿ ಆಸ್ಪತ್ರೆ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಂಗೇರಿ-ಉತ್ತರಹಳ್ಳಿಯ ಚನ್ನಸಂದ್ರದಲ್ಲಿರುವ ಪಾಥ್ ವೇ ಆಸ್ಪತ್ರೆ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೇ 17ರಂದು ಲಕ್ಷ್ಮಿನಾರಾಯಣ್ ಎಂಬುವರಿಗೆ ಪಾಸಿಟಿವ್ ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೇ 27ರಂದು ಮೃತಪಟ್ಟಿದ್ದರು.
ಚಿಕಿತ್ಸಾ ವೆಚ್ಚದ ರೂಪದಲ್ಲಿ ರೋಗಿಯ ಕುಟುಂಬಸ್ಥರು ₹4.5 ಲಕ್ಷ ಪಾವತಿಸಿದ್ದರೂ ಮತ್ತೆ 3.67 ಲಕ್ಷ ರೂಪಾಯಿ ಬಿಲ್ ಕಟ್ಟುವಂತೆ ಆಸ್ಪತ್ರೆ ಆಡಳಿತ ಮಂಡಳಿ ತಾಕೀತು ಮಾಡಿತ್ತು. ಬಿಲ್ ಕಟ್ಟಲು ಹಣವಿಲ್ಲ ಎಂದಿದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದೆ ಎಂದು ಆರೋಪಿಸಲಾಗಿದೆ.
ಮೃತ ಸಂಬಂಧಿಕರೊಬ್ಬರನ್ನು ಗೃಹಬಂಧನದಲ್ಲಿ ಇರಿಸಿ, ಹಣ ಪಾವತಿಸದಿದ್ದರೆ ಶವ ನೀಡಲು ನಿರಾಕರಿಸಿತ್ತು. ಈ ಮಾಹಿತಿ ಆಧರಿಸಿ ಪೊಲೀಸರು ವಿಚಾರಣೆ ನಡೆಸಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಯಾವುದೇ ವ್ಯಕ್ತಿ ಮೃತಪಟ್ಟ ನಂತರ ಆಸ್ಪತ್ರೆಯು ಉಳಿದ ಹಣ ನೀಡಲು ಒತ್ತಾಯಿಸಕೂಡದು ಎಂದು ಇತ್ತೀಚೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು.
ಓದಿ: ಕೃಷಿಗೆ ಪೂರಕವಾಗಿ ಮತ್ತೊಮ್ಮೆ ಮಾರ್ಗಸೂಚಿ ಪರಿಷ್ಕರಿಸಿದ ರಾಜ್ಯ ಸರ್ಕಾರ: ರಸಗೊಬ್ಬರ ಸಾಗಣೆ ಇನ್ನು ಸುಗಮ