ಬೆಂಗಳೂರು: ಕರ್ನಾಟಕ ಸೊಸೈಟಿ ಕಾಯ್ದೆಯಡಿ ನೋಂದಣಿಯಾಗಿದ್ದು, ಸದಸ್ಯರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿರುವ ಕ್ಲಬ್‌ಗಳಲ್ಲಿ ಕೇರಮ್, ಚೆಸ್, ರಮ್ಮಿ, ಸ್ನೂಕರ್ ಮತ್ತಿತರ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪರವಾನಗಿ ಪಡೆಯುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಚೆಸ್ ಹಾಗೂ ಕೇರಮ್ ಸೇರಿದಂತೆ ಮನೋರಂಜನಾ ಚಟುವಟಿಕೆ ನಡೆಸಲು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಅನುಮತಿ ಪಡೆಯಬೇಕು ಎಂದು ಒತ್ತಾಯಿಸಿದ ಪೊಲೀಸರ ಕ್ರಮ ಪ್ರಶ್ನಿಸಿ ಮೈಸೂರಿನ ಸಿರಗಳ್ಳಿ ಲಕ್ಷ್ಮೀದೇವಿ ರಿಕ್ರಿಯೇಷನ್ ಕ್ಲಬ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ನ್ಯಾಯಪೀಠ, ಅರ್ಜಿದಾರ ಕ್ಲಬ್ನ ಕಾನೂನಾತ್ಮಕ ಚಟುವಟಿಕೆಗಳಿಗೆ ಅಡ್ಡಿಪಡಿಸಬಾರದು ಎಂದು ಪೊಲೀಸರಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.
ಕ್ಲಬ್ ತನ್ನ ಸದಸ್ಯರಿಗೆ ಮನರಂಜನಾ ಚಟುವಟಿಕೆ ಒದಗಿಸುವ ಸಂಘವಾಗಿದೆ. ಉಚಿತವಾಗಿ ಹಾಗೂ ಯಾವುದೇ ಮೊತ್ತ ಪಾವತಿಸಿ ಪ್ರವೇಶ ಕೋರಲು ಸಾರ್ವಜನಿಕ ಸದಸ್ಯರು ಅರ್ಹರಿಲ್ಲ. ಸದಸ್ಯರಿಗೆ ಮಾತ್ರ ಪ್ರವೇಶವಿದೆ. ಹಾಗಾಗಿ, ಯಾವುದೇ ಕ್ಲಬ್ ಅಥವಾ ಸಂಘವು ಮನೋರಂಜನಾ ಚಟುವಟಿಕೆ ಆಯೋಜಿಸಲು ಯಾವುದೇ ಅನುಮತಿ ಅಥವಾ ಪರವಾನಗಿ ಪಡೆಯುವ ಅಗತ್ಯವಿಲ್ಲ. ಕರ್ನಾಟಕ ಪೊಲೀಸ್ ಕಾಯ್ದೆಯಡಿ ಅನುಮತಿ ಪಡೆಯುವಂತೆ ಪೊಲೀಸರು ಒತ್ತಾಯ ಮಾಡುತ್ತಿರುವುದು ಏಕಪಕ್ಷೀಯ ಮತ್ತು ನ್ಯಾಯಸಮ್ಮತವಲ್ಲದ ಕ್ರಮವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಪ್ರತಿಯೊಂದು ಸಂಘ, ಸೊಸೈಟಿ ಅಥವಾ ಕ್ಲಬ್ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿವೆ ಎಂಬುದಾಗಿ ಪೊಲೀಸರು ಊಹಿಸಿಕೊಳ್ಳಬಾರದು. ಪೊಲೀಸ್ ಕಾಯ್ದೆಯ ನಿಯಮಗಳನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಪೊಲೀಸರು ತಮ್ಮ ಅಧಿಕಾರ ಬಳಸಬೇಕು. ಆದರೆ, ಕ್ಲಬ್ ಆವರಣದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಸಬಾರದು. ಈ ವಿಚಾರದಲ್ಲಿ ಅಗತ್ಯವಿದ್ದರೆ ಪರಿಶೀಲನೆ ನಡೆಸಿ ಕ್ಲಬ್ ಚಟುವಟಿಕೆಗಳ ಸ್ವರೂಪ ತಿಳಿಯಲು ಪೊಲೀಸ್ ಪ್ರಾಧಿಕಾರಗಳು ಮುಕ್ತವಾಗಿವೆ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?.. ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಟಿ. ಮೇಘದಹಳ್ಳಿ ಗ್ರಾಮದ ‘ಸಿರಗಳ್ಳಿ ಲಕ್ಷ್ಮಿದೇವಿ ರಿಕ್ರಿಯೇಷನ್ ಕ್ಲಬ್’ 2022ರ ಏ.13ರಂದು ನೋಂದಣಿಯಾಗಿತ್ತು. ಚೆಸ್, ಕ್ಯಾರಮ್, ಬಿಲಿಯರ್ರ್ಡ್/ಸ್ನೂಕರ್ ಸೇರಿದಂತೆ ಇನ್ನಿತರ ಒಳಾಂಗಣ ಕ್ರೀಡೆ ಮತ್ತು ಹೊರಾಂಗಣ ಕ್ರೀಡೆ ನಡೆಸುವುದಕ್ಕೆ ಅನುಮತಿ ಕೋರಿ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ, ಉಪ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ತಲಕಾಡು ಪೊಲೀಸ್ ಠಾಣಾಧಿಕಾರಿಗೆ ಮನವಿ ಸಲ್ಲಿಸಿತ್ತು. ಆದರೆ, ಮನೋರಂಜನಾ ಕ್ರೀಡೆ ನಡೆಸಲು ಅನುಮತಿ ನೀಡುವುದಕ್ಕೆ ಪೊಲೀಸರು ನಿರಾಕರಿಸಿದ್ದರು. ಅಲ್ಲದೆ, ಈ ಮನೋರಂಜನೆ ಚಟುವಟಿಕೆ ನಡೆಸಲು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪರವಾನಗಿ ಪಡೆಯಬೇಕಿದೆ ಎಂದು ಪೊಲೀಸರು ತಿಳಿಸಿದ್ದರು.
ಈ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಕ್ಲಬ್, ತನ್ನೆಲ್ಲಾ ಸದಸ್ಯರಿಗೆ ಪ್ರಯೋಜನಕಾರಿಯಾಗುವಂತೆ ರಮ್ಮಿ, ಚೆಸ್, ಕೇರಮ್, ಬಿಲಿಯರ್ರ್ಡ್/ಸ್ನೂಕರ್ ಸೇರಿದಂತೆ ಇನ್ನಿತರ ಒಳಾಂಗಣ ಕ್ರೀಡೆ ಮತ್ತು ಹೊರಾಂಗಣ ಕ್ರೀಡೆ ನಡೆಸುವುದಕ್ಕೆ ಸಾರ್ವಜನಿಕ ಮನೋರಂಜನಾ ಸ್ಥಳಗಳ ಪರವಾನಗಿ ಮತ್ತು ನಿಯಂತ್ರಣ ನಿಯಮಗಳ ಅಡಿಯಲ್ಲಿ ಪರವಾನಗಿ ಅಥವಾ ಅನುಮತಿ ಪಡೆಯುವ ಅಗತ್ಯವಿಲ್ಲ ಎಂಬುದಾಗಿ ಘೋಷಿಸಬೇಕು. ಮನೋರಂಜನಾ ಚಟುವಟಿಕೆಗಳನ್ನು ನಡೆಸಲು ಅನುಮತಿ ಪಡೆಯಲು ಒತ್ತಾಯಿಸದಂತೆ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಕ್ಲಬ್ ಅರ್ಜಿಯಲ್ಲಿ ಮನವಿ ಮಾಡಿತ್ತು.
ಓದಿ: ಅಧಿಕಾರಿಗಳ ವಿರುದ್ಧದ ಆರೋಪಕ್ಕೆ ವರ್ಗಾವಣೆ ಪರಿಹಾರವಲ್ಲ.. ಶಿಸ್ತು ಕ್ರಮಕ್ಕೆ ಹೈಕೋರ್ಟ್ ಸೂಚನೆ