ಬೆಂಗಳೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನ ಬೆಂಗಳೂರಿನ ಜಕ್ಕರಾಯನಕೆರೆ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು.
ಗಿಡ ನೆಡುವ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಂಚಾರ ಪೊಲೀಸ್ ವಿಭಾಗದ ಆಯುಕ್ತ ರವಿಕಾಂತೇಗೌಡ, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಇತರೆ ಟ್ರಾಫಿಕ್ ಡಿಸಿಪಿಗಳು ಭಾಗಿಯಾಗಿದ್ದರು.
ಬಳಿಕ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಇಂದು ಪರಿಸರ ದಿನಾಚರಣೆ ಹೀಗಾಗಿ ಜಕ್ಕರಾಯನ ಕೆರೆಯಲ್ಲಿನ ಪೊಲೀಸ್ ಇಲಾಖೆ ಜಾಗದಲ್ಲಿ 200 ವಿವಿಧ ತಳಿಯ ಗಿಡಗಳನ್ನು ನೆಡಲಾಗಿದೆ ಎಂದರು.
ಅಲ್ಲದೇ ಜಕ್ಕರಾಯನಕೆರೆಯ ಬಳಿ ಇರುವ ಪರೇಡ್ ಗ್ರೌಂಡ್ ನಲ್ಲಿ ಸದ್ಯ ನಿರಪಯುಕ್ತ ಹಾಗೂ ಜಪ್ತಿ ಮಾಡಿದ ವಾಹನಗಳನ್ನು ಸದ್ಯ ಇಲ್ಲಿ ಇಡಲಾಗಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಇಲ್ಲಿ ಇಟ್ಟಿದ್ದು, ಕೊರ್ಟ್ ಅನುಮತಿ ಪಡೆದು ಮುಂದಿನ ದಿನದಲ್ಲಿ ವಾಹನಗಳನ್ನು ವಿಲೇವಾರಿ ಮಾಡಿ ಆ ಜಾಗದಲ್ಲಿ ಇನ್ನು ಹೆಚ್ಚಿನ ಗಿಡಗಳನ್ನು ನೆಡಲಾಗುವುದು ಎಂದು ತಿಳಿಸಿದರು.