ಬೆಂಗಳೂರು: ಕೊರೊನಾ ವಾರಿಯರ್ಸ್ ಆಗಿ ಅವಿರತವಾಗಿ ಶ್ರಮಿಸುತ್ತಿದ್ದ ಮೂವರು ಪೊಲೀಸರು ಮೃತಪಟ್ಟ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರಿಗೆ ಗೃಹ ಸಚಿವ ಬಸವರಾಜ ಬೊಮ್ಮಯಿ ತಲಾ 30 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ನಗರ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದ ಕಲಾಸಿಪಾಳ್ಯ ಠಾಣೆಯ ಹೆಚ್.ಸಿ.ಬೇಲೂರಯ್ಯ, ವಿ.ವಿ.ಪುರ ಠಾಣೆಯ ಎಎಸ್ಐ ಶಿವಣ್ಣ ಹಾಗೂ ವಿಲ್ಸನ್ ಗಾರ್ಡನ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಕಲ್ಕಯ್ಯ ಹಿರೇಮಠ್ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು.
ಬಳಿಕ ಮಾತನಾಡಿದ ಸಚಿವರು, ಪ್ರತಿಯೊಬ್ಬ ಕಾನ್ಸ್ಟೇಬಲ್ಗಳ ಕುಟುಂಬದ ಕಾಳಜಿ ನಾವು ವಹಿಸುತ್ತೇವೆ. ಪೊಲೀಸರಿಗೆ ಅಗತ್ಯ ಆರೋಗ್ಯ ಸಲಕರಣೆ ನೀಡುತ್ತಿದ್ದೇವೆ. ಸೋಂಕು ಪತ್ತೆಯಾದ ಸ್ಟೇಷನ್ಗಳಲ್ಲಿ ಸ್ಯಾನಿಟೈಸ್ ಮಾಡಿ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಸೋಂಕು ಕಾಣಿಸಿಕೊಂಡು ಗುಣಮುಖರಾದವರು ಸಾಕಷ್ಟು ಪೊಲೀಸರು ಇದ್ದಾರೆ ಎಂದರು.
ಗುಣಮುಖರಾದವರು ತಾವು ಕೊರೊನಾ ವಿರುದ್ಧ ಗೆದ್ದು ಬಂದ ಬಗ್ಗೆ ಮಾತನಾಡಬೇಕು. ಪೊಲೀಸರೆಂದರೆ ಎಂತಹ ಕಠಿಣ ಸಂದರ್ಭವನ್ನೂ ಎದುರಿಸಲು ಸಿದ್ಧವಿರುವ ಯೋಧರಿದ್ದಂತೆ. ಗಟ್ಟಿಯಾದ ಮನೋಬಲದಿಂದ ಅವರು ಕೆಲಸ ಮಾಡುತ್ತಿದ್ದಾರೆ. ಯಾರೂ ಈ ಸಂದರ್ಭದಲ್ಲಿ ಧೃತಿಗೆಡದೆ ಸುರಕ್ಷತಾ ಕ್ರಮಗಳನ್ನ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ಸೋಂಕಿತ ಪೊಲೀಸರನ್ನು ಚಿಕಿತ್ಸೆಗೆ ರವಾನಿಸಲು ವಿಳಂಬವಾಗುತ್ತಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಈ ಹಿಂದೆ ಸೋಂಕಿತರಿಗೆ ಮೊದಲು ವಿಚಾರ ತಿಳಿಸಲಾಗುತ್ತಿತ್ತು. ನಂತರ ಆರೋಗ್ಯ ಇಲಾಖೆಗೆ ಮಾಹಿತಿ ತಿಳಿಯುತ್ತಿದ್ದರಿಂದ ವಿಳಂಬವಾಗ್ತಿತ್ತು. ವ್ಯವಸ್ಥೆಯಲ್ಲಿದ್ದ ದೋಷವನ್ನ ಈಗ ಸರಿಪಡಿಸಲಾಗಿದೆ. ಪೊಲೀಸರಷ್ಟೇ ಅಲ್ಲ ಯಾರೇ ಸೋಂಕಿತರಿರಲಿ ಆಂಬ್ಯುಲೆನ್ಸ್ ಸಮೇತ ಅವರ ಮನೆ ಬಳಿ ಹೋಗಲಾಗುತ್ತಿದೆ.
ಈಗಾಗಲೇ ಸೋಂಕಿತ ಕೆಲವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಕೆಲ ಆಸ್ಪತ್ರೆಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಈಗ ಅಧಿಕಾರಿಗಳ ಮಟ್ಟದಲ್ಲಿ ಸಭೆ ಇದ್ದು, ಆ ಬಗ್ಗೆ ತೀರ್ಮಾನಿಸಲಿದ್ದೇವೆ. ಮೀಸಲಿರಿಸುವ ಆಸ್ಪತ್ರೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.