ಬೆಂಗಳೂರು: ನಗರದ ಚಾಮರಾಜಪೇಟೆ ಸಿಎಆರ್ ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿ ಹುತಾತ್ಮರಾದ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಇಂದು ಮರೆಯಲಾಗದ ದಿನ. ಪೊಲೀಸ್ ಪಡೆಗೆ ತನ್ನದೇ ಆದ ಇತಿಹಾಸವಿದೆ. ನಾಡಿಗಾಗಿ ಲಕ್ಷಾಂತರ ಜನ ಪೊಲೀಸರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಸಮಾಜದಲ್ಲಿ ಶಾಂತಿ ಇರಬೇಕು ಎಂಬ ಕಾರಣಕ್ಕೆ ಗಲಭೆ ನಡೆದ ವೇಳೆ ಮಹತ್ತರವಾದ ಕೆಲಸ ಮಾಡಿ, ದುಷ್ಟ ಶಕ್ತಿಗಳು ನಡೆಸಿದ ದುಷ್ಕೃತ್ಯಕ್ಕೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಲಾ ಶುಡ್ ಲೀಡ್ ದಿ ಕ್ರೈಂ ಎಂಬ ಸನ್ನಿವೇಶ ಜಾರಿಗೆ ತರಬೇಕಿದೆ. ಹಿರಿಯ ಅಧಿಕಾರಿಗಳು ಫೀಲ್ಡ್ಗೆ ಇಳಿದರೆ ಎಲ್ಲಾ ಪೊಲೀಸರಿಗೂ ಧೈರ್ಯ, ಉತ್ಸಾಹ ಬರುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಆಂತರಿಕ ಭಯೋತ್ಪಾದನೆ ಶಮನ ಮಾಡಲು ಇಂಟಲಿಜೆನ್ಸ್ ಮಾತ್ರ ಕಾರ್ಯ ಪ್ರವೃತ್ತವಾಗದೇ ಪೊಲೀಸರೂ ಕೂಡ ಕೆಲಸ ಮಾಡಬೇಕು. ಈಗಾಗಲೇ ನಗರದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಠಾಣೆಗಳಿದ್ದು, ಪ್ರತಿಯೊಂದು ಠಾಣೆಗೆ ಸ್ವಂತ ಕಟ್ಟಡ ಇರುವಂತೆ ಯೋಜನೆ ರೂಪಿಸಲಾಗುವುದು. ಜೊತೆಗೆ ಬೆಂಗಳೂರಿನಲ್ಲಿ ಹುತಾತ್ಮ ಪೊಲೀಸರ ಬಗ್ಗೆ ಅರಿವು ಮೂಡಿಸಲು ಡಿಜಿಟಲೀಕರಣ ಇರುವ ಐತಿಹಾಸಿಕ ಮ್ಯೂಸಿಯಂ ಮಾಡಲು ನಿರ್ಧರಿಸಿದ್ದೇವೆ ಎಂದರು.
ಇದನ್ನೂ ಓದಿ: ಕಾರವಾರದಲ್ಲಿ ಹುತಾತ್ಮ ಪೊಲೀಸರ ಸ್ಮರಣೆ: 3 ಸುತ್ತು ಕುಶಾಲತೋಪು ಹಾರಿಸಿ ಸಂತಾಪ
ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಅಪಘಾತಕ್ಕೀಡಾಗಿದ್ದ ಬೆಂಗಳೂರಿನ ಶಿವಾಜಿನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್, ಜಮಖಂಡಿ ತಾಲೂಕಿನ ತಿಕ್ಕಲಕಿ ಗ್ರಾಮದ ಅನಿಲ್ ಮುಲಿಕ್ ಅವರ ತಂದೆ ದಾಜಿಬಾ, ತಾಯಿ ಶಾಂತಾಬಾಯಿ ಅವರನ್ನ ಭೇಟಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿ, ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.