ಬೆಂಗಳೂರು: ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ಬಗ್ಗೆ ತನಿಖೆ ಮುಂದುವರೆದಿದೆ. ಈ ವ್ಯಾಪ್ತಿಯಲ್ಲಿ ಹಲವಾರು ಪ್ರಕರಣಗಳಡಿ ಭಾಗಿಯಾಗಿದ್ದ ಪುಡಿ ರೌಡಿವೋರ್ವನ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಡಿ.ಜೆ.ಹಳ್ಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ನಾಗದೇವ್, ಆರೋಪಿ ಪ್ರೇಮ್ ಕುಮಾರ್ ಎಂಬಾತನ ಬಗ್ಗೆ ಖಚಿತ ಮಾಹಿತಿ ಪಡೆದು ಡಿ.ಜೆ. ಹಳ್ಳಿಯ ಎಲ್.ಆರ್. ಬಂಡೆಯ ಬಳಿ ಆತನನ್ನು ಸೆರೆ ಹಿಡಿಯಲು ತೆರಳಿದ್ದಾರೆ. ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಎನ್ನಲಾಗ್ತಿದೆ. ಸಬ್ ಇನ್ಸ್ಪೆಕ್ಟರ್ ಶರಣಾಗುವಂತೆ ಸೂಚಿಸಿದ್ದರೂ ಸಹ ಒಪ್ಪದೇ ಓಡಿ ಹೋಗಲು ಯತ್ನಿಸಿದಾಗ ಆರೋಪಿ ಕಾಲಿಗೆ ಫೈರಿಂಗ್ ಮಾಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪ್ರೇಮ್ ಕುಮಾರ್ ಡಿ.ಜೆ. ಹಳ್ಳಿಯ ಹಲವು ಪ್ರಕರಣಗಳಲ್ಲಿ ವಾಂಟೆಡ್ ಲಿಸ್ಟ್ನಲ್ಲಿದ್ದ ವ್ಯಕ್ತಿಯಾಗಿದ್ದು, ಕೊಲೆಯತ್ನ ಸೇರಿದಂತೆ ಮಚ್ಚು, ಲಾಂಗುಗಳಿಂದ ಹಲ್ಲೆ ಮಾಡಿರುವ ಪ್ರಕರಣಗಳು ಈತನ ಮೇಲೆ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಹಿಡಿಯುವ ಮುನ್ನ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ವಶಕ್ಕೆ ಪಡೆಯಲು ಪ್ರಯತ್ನಿಸಿದ್ದು, ಈ ವೇಳೆ ಶರಣಾಗದ ಕಾರಣ ಪ್ರೇಮ್ ಕುಮಾರ್ ಎಡಗಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗೆ ಬೌರಿಂಗ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.