ಬೆಂಗಳೂರು: ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೂ ಕೊರೊನಾ ಕಾಡುತ್ತಿದ್ದು, ಇಂದು ಬೆಂಗಳೂರಿನಲ್ಲಿ ಮತ್ತೊಬ್ಬ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದೆ.
ಸಂಪಂಗಿ ರಾಮನಗರ ಠಾಣೆಯ ಕಾನ್ಸ್ಟೇಬಲ್ವೊಬ್ಬರಿಗೆ ನಾಲ್ಕು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಅವರನ್ನು ವೈದ್ಯಕೀಯ ತಪಾಸಣೆ ಮಾಡಿದ ಬಳಿಕ ಇಂದು ಅವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಚಿಕಿತ್ಸೆಗಾಗಿ ಅವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕರೆದೊಯ್ದಿದ್ದಾರೆ.
ಠಾಣೆಯಲ್ಲಿ ಹಲವರ ಜೊತೆ ಕಾನ್ಸ್‌ಟೇಬಲ್ ಪ್ರಾಥಮಿಕ ಸಂಪರ್ಕದಲ್ಲಿದ್ದು, ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲು ಸಿದ್ಧತೆ ನಡೆಸಲಾಗಿದೆ. ಹಾಗೆಯೇ ಅವರ ಗಂಟಲು ದ್ರವ ಪರೀಕ್ಷೆ ಮಾಡುವಂತೆ ಸೂಚಿಸಲಾಗಿದೆ.
ಕಾನ್ಸ್‌ಟೇಬಲ್ ಠಾಣೆಯಲ್ಲಿ ಹಲವೆಡೆ ಓಡಾಟ ಮಾಡಿದ ಕಾರಣ ಠಾಣೆಗೆ ಸ್ಯಾನಿಟೈಸ್ ಮಾಡಿ, ಸಿಬ್ಬಂದಿ ಜಾಗ್ರತೆಯಿಂದ ಕೆಲಸ ಮಾಡುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.