ಬೆಂಗಳೂರು: ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರ ಎರಡು ವರ್ಷಗಳಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ನಡಾವಳಿ ಹೊರಡಿಸಿದ್ದಾರೆ. ಪೊಲೀಸ್ ಕಾನ್ಸ್‌ಟೇಬಲ್(ಸಿವಿಲ್) ಹುದ್ದೆ ಮತ್ತು ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್ ಮತ್ತು ಡಿಎಆರ್) ಹುದ್ದೆಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಅಂದರೆ 2022-23ನೇ ಸಾಲಿಗೆ ಮಾತ್ರ ಹೆಚ್ಚಿಸಲಾಗಿದೆ. ಈ ವೇಳೆ ನೇಮಕಾತಿಗೆ ಕರೆದಿರುವ ಸಿಎಆರ್, ಡಿಎಆರ್ 420+3064 ಸೇರಿ ಒಟ್ಟೂ 3,484 ಹುದ್ದೆಗಳಿಗೆ ಮತ್ತು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ 1,137+454 ಸೇರಿದಂತೆ ಒಟ್ಟು 1,591 ಹುದ್ದೆಗಳಿಗೆ ಮಾತ್ರ ಗರಿಷ್ಠ ವಯೋಮಿತಿಯನ್ನು ಎರಡು ವರ್ಷಗಳಿಗೆ ಹೆಚ್ಚಿಸಲಾಗಿದೆ.
ಉದ್ಯೋಗಾಕಾಂಕ್ಷಿಗಳ ಬಹುದಿನದ ಬೇಡಿಕೆಯಾಗಿದ್ದ ಗರಿಷ್ಠ ವಯೋಮಿತಿಯ ಕುರಿತಂತೆ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅಗತ್ಯ ತಿದ್ದುಪಡಿ ಷರತ್ತಿನಂತೆ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಗೃಹ ಸಚಿವರ ಕಾಲಿಗೆ ಬಿದ್ದ ಪೊಲೀಸ್ ಕಾನ್ಸ್‌ಟೇಬಲ್ ಆಕಾಂಕ್ಷಿಗಳು