ಬೆಂಗಳೂರು:ಮಹಿಳಾ ಪೊಲೀಸರ ಕುಂದುಕೊರತೆಗಳಿಗೆ ಪರಿಹಾರ ಕಲ್ಪಿಸಿ ಮಹಿಳಾ ಪೊಲೀಸರ ಸಬಲೀಕರಣಗೊಳಿಸಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಪ್ರತ್ಯೇಕ ಮಹಿಳಾ ಪೊಲೀಸ್ ಶೌಚಾಲಯ ಸೇರಿದಂತೆ ವಿವಿಧ ಸಮಸ್ಯೆ ಅನುಭವಿಸುತ್ತಿರುವ ಮಹಿಳಾ ಪೊಲೀಸರ ಕುಂದುಕೊರತೆಗಳಿಗೆ ಪರಿಹಾರ ಕಲ್ಪಿಸುವುದರ ಜೊತೆಗೆ ಮಾನಸಿಕವಾಗಿ ಸದೃಢಗೊಳಿಸಲು ನಗರ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ.ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ಪೊಲೀಸ್ ಠಾಣೆಗಳು, ಸೈಬರ್ ಕ್ರೈಂ ಠಾಣೆ ಸೇರಿದಂತೆ ನಗರದಲ್ಲಿ ಒಟ್ಟು 156 ಪೊಲೀಸ್ ಠಾಣೆಗಳಲ್ಲಿ ಸುಮಾರು 1780 ಮಹಿಳಾ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ.ಸದಾ ಒತ್ತಡದಲ್ಲಿ ಮುಳುಗಿರುವ ಮಹಿಳಾ ಪೊಲೀಸರು ಕೆಲಸ ಮಾಡುವ ಸ್ಥಳದಲ್ಲಿ ಎದುರಾಗುವ ಕುಂದುಕೊರತೆ ಹೋಗಲಾಡಿಸಲು ಇತ್ತೀಚೆಗೆ ನಗರದ ಮಹಿಳಾ ಡಿಸಿಪಿಗಳೊಡನೆ ಸಭೆ ನಡೆಸಿರುವ ಪೊಲೀಸ್ ಆಯುಕ್ತರು, ಮಹಿಳಾ ಪೊಲೀಸರು ಎದುರಿಸುತ್ತಿರುವ ಸಮಸ್ಯೆಗಳು, ಮಾನಸಿಕ ಹಾಗೂ ದೈಹಿಕವಾಗಿ ಅವರನ್ನು ಸದೃಢಗೊಳಿಸಲು ಕೈಗೊಳ್ಳಬೇಕಾದ ಸುಧಾರಣೆ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಠಾಣಾ ಮಟ್ಟದಲ್ಲಿ ಮಹಿಳಾ ಕಾನ್ ಸ್ಟೇಬಲ್ ಗಳ ಜೊತೆ ಸಮಾಲೋಚಿಸಿ ಅವರು ಅನುಭವಿಸುತ್ತಿರುವ ಸಮಸ್ಯೆಗಳು ಅವರಿಂದ ಬರುವ ಸಲಹೆ ಸೂಚನೆಗಳನ್ನು ಕ್ರೋಢಿಕರಿಸಿ ಇನ್ನೊಂದು ತಿಂಗಳಲ್ಲಿ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ ನಗರ ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್, ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸಫೆಟ್ ಹಾಗೂ ಟ್ರಾಫಿಕ್ ವಿಭಾಗದ ನಾರ್ತ್ ಡಿವಿಷನ್ ಡಿಸಿಪಿ ಸಾ.ರಾ.ಫಾತಿಮಾ, ಪಶ್ಚಿಮ ವಿಭಾಗದ ಡಿಸಿಪಿ ಕವಿತಾ ರಾಣಿ ಅವರಿಗೆ ತಮ್ಮ ತಮ್ಮ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಪೊಲೀಸರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ರಿಪೋರ್ಟ್ ನೀಡುವಂತೆ ಜವಾಬ್ದಾರಿ ವಹಿಸಲಾಗಿದೆ.ನಗರದ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಮಹಿಳಾ ಶೌಚಾಲಯಗಳು ಇದೆಯಾ ಎಂಬುದನ್ನು ಕಂಡುಕೊಳ್ಳಿ.. ಶೌಚಾಲಯಗಳಿದ್ದರೆ ನಿರ್ವಹಣೆ ಸರಿ ಇದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ... ಮಹಿಳೆಯರಿಗಾಗಿ ಪ್ರತ್ಯೇಕ ಕೊಠಡಿ ಇರಬೇಕು. ಹಲವು ಪೊಲೀಸ್ ಠಾಣೆಗಳಲ್ಲಿ ಸ್ಥಳಾವಕಾಶ ಕೊರತೆಯಿಂದ ಕೊಠಡಿಗಳಿಲ್ಲ ಎಂದು ತಿಳಿದುಕೊಂಡಿದ್ದೇನೆ.. ಅಂತಹ ಸ್ಟೇಷನ್ ಗಳನ್ನು ಪಟ್ಟಿ ಮಾಡಿ. ಬಾಣಂತನ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಮಕ್ಕಳ ಲಾಲನೆ-ಪಾಲನೆ ಮಾಡುವಂತೆ ಸೂಕ್ತ ವಾತಾವರಣ ನಿರ್ಮಿಸಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ಮಹಿಳಾ ಪೊಲೀಸರಿಂದಲೇ ಸಲಹೆ -ಸೂಚನೆ ಪಡೆದುಕೊಳ್ಳುವಂತೆ ಆಯುಕ್ತರು ಸೂಚನೆ ನೀಡಿರುವುದಾಗಿ ಡಿಸಿಪಿಯೊಬ್ಬರು ಈಟಿವಿ ಭಾರತ್ಗೆ ತಿಳಿಸಿದ್ದಾರೆ.